

ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಆಗಸ್ಟ್ 14ರಂದು ಮಾತನಾಡಿ, ನೂತನ ಜಿಲ್ಲಾಸ್ಪತ್ರೆ ಕಾಮಗಾರಿ 2021ರ ಡಿಸೆಂಬರ್ನಲ್ಲಿ ಪ್ರಾರಂಭಗೊಂಡಿದ್ದು, ಅಂತಿಮ ಹಂತದಲ್ಲಿದೆ. ಆದರೆ, ಮೂಲ ಅಂದಾಜಿನ ಅಂಶಗಳಲ್ಲಿ ಕೆಲವು ಕಾಮಗಾರಿಗಳ ಅಗತ್ಯ ಬದಲಾವಣೆ ಹಾಗೂ ಹೆಚ್ಚುವರಿ ಅಂಶ ಸೇರ್ಪಡೆಯಿಂದ ನಿರ್ಮಾಣ ಕಾಮಗಾರಿ ವಿಳಂಬವಾಗಿದೆ ಎಂದು ಮಾಹಿತಿ ನೀಡಿದರು.
ಕಾಮಗಾರಿಗೆ 115 ಕೋಟಿ ರೂ. ಆಡಳಿತಾತ್ಮಕ ಅನುಮೋದನೆ ಲಭಿಸಿದ್ದು, ಟೆಂಡರ್ ಮೊತ್ತ 110.24 ಕೋಟಿ ರೂ. ಇದೆ. ಈ ಮೊತ್ತದಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ ಜಿಎಸ್ಟಿ ಮೊತ್ತ ಸುಮಾರು 20.42 ಕೋಟಿ ರೂ. ಮತ್ತು ಟೆಂಡರ್ ಕರಾರಿನಂತೆ ದರ ಏರಿಕೆ (ಪೆಸ್ ಎಕ್ಸಲೇಶನ್) ಮೊತ್ತ ಅಂದಾಜು 18.44 ಕೋಟಿ ರೂ.ವನ್ನು ಮೂಲ ಅಂದಾಜಿನಲ್ಲಿ ಅಳವಡಿಸಿಕೊಂಡಿಲ್ಲ ಎಂದರು.
ಆಸ್ಪತ್ರೆಗೆ ಅವಶ್ಯವಿರುವ ಇನ್ನಿತರ ಕಾಮಗಾರಿಗಳಿಗಾಗಿ 9.50 ಕೋಟಿ ರೂ. ಸೇರಿ ಒಟ್ಟು 48.36 ಕೋಟಿ ರೂ. ಹೆಚ್ಚುವರಿ ಅನುದಾನ ಬೇಕಿದೆ. ಸದರಿ ಹೆಚ್ಚುವರಿ ಅಂಶಗಳನ್ನು ಪರಿಗಣಿಸಿ ಸರ್ಕಾರಕ್ಕೆ ಅನುಮೋದನೆ ಕೋರಿದ ಕಡತ ವರ್ಷಗಳಿಂದ ಮಂಜೂರಾತಿಗೆ ಬಾಕಿ ಉಳಿದಿದೆ. ವೈದ್ಯಾಧಿಕಾರಿಗಳು, ವೈದ್ಯಕೇತರ ಸಿಬ್ಬಂದಿ ಹುದ್ದೆಯೂ ಮಂಜೂರಾಗಿಲ್ಲ. ಹೆಚ್ಚುವರಿ ವೈದ್ಯಕೀಯ ಸಲಕರಣೆ ಖರೀದಿಗಾಗಿ 30 ಕೋಟಿ ರೂ. ಅನುದಾನದ ಪ್ರಸ್ತಾವನೆಯ ಮಂಜೂರಾತಿಯೂ ಬಾಕಿಯಿದೆ. ಆರೋಗ್ಯ ಇಲಾಖೆಯ ಸರ್ವರ್ ಸಮಸ್ಯೆಯಿಂದಾಗಿ ಆಯುಷ್ಮಾನ್ ಭಾರತ ಯೋಜನೆಯ ಸೌಲಭ್ಯದಿಂದ ರೋಗಿಗಳು ವಂಚಿತರಾಗುತ್ತಿದ್ದಾರೆ ಎಂದು ಶಾಸಕ ಯಶ್ಪಾಲ್ ಗಮನಕ್ಕೆ ತಂದರು.