ಗಂಟಲು ಕ್ಯಾನ್ಸರ್ ಶಸ್ತ್ರ ಚಿಕಿತ್ಸೆಗೆ ನೆರವಾದ ಶಾಸಕ

12 vpt 5
ಗಂಟಲು ಕ್ಯಾನ್ಸರ್ ಶಸ್ತ್ರ ಚಿಕಿತ್ಸೆಗೆ ನೆರವಾದ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಅಣ್ಣಪ್ಪ ಕುಟುಂಬದ ಸದಸ್ಯರು ಕೃತಜ್ಞತೆ ಸಲ್ಲಿಸಿದರು. ಪಟ್ಟಡ ರಂಜಿ ಪೂಣಚ್ಚ, ಮನು, ರವೀಂದ್ರ ಬಾವೆ, ಪ್ರಕಾಶ್ ಇದ್ದರು.
Published on

ವಿರಾಜಪೇಟೆ: ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಸಮೀಪದ ಚೆನ್ನಯ್ಯನಕೋಟೆ ನಿವಾಸಿ ಅಣ್ಣಪ್ಪ ಅವರ ಗಂಟಲು ಕ್ಯಾನ್ಸರ್ ಶಸ್ತ್ರ ಚಿಕಿತ್ಸೆಗೆ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ನೆರವಾದರು.

ಗಂಟಲಿನಲ್ಲಿ ಊತ ಕಂಡು ಹಿನ್ನೆಲೆಯಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ತಪಾಸಣೆಗೆ ಹೋದಾಗ ಗಂಟಲು ಕ್ಯಾನ್ಸರ್ ಪತ್ತೆಯಾಯಿತು. ಶಸ್ತ್ರ ಚಿಕಿತ್ಸೆ ಗೆ ಅಂದಾಜು 8 ಲಕ್ಷ ರೂ.ವೆಚ್ಚವಾಗಬಹುದು ಎಂದು ಅಲ್ಲಿನ ವೈದ್ಯರು ಮಾಹಿತಿ ನೀಡಿದರು.

ತಕ್ಷಣ ಅಣ್ಣಪ್ಪ ಸಹೋದರ ಮಣಿಕಂಠ ಅವರು ಸ್ಥಳೀಯ ಕಾಂಗ್ರೆಸ್ ಮುಖಂಡರಿಗೆ ಮಾಹಿತಿ ನೀಡಿ ಶಾಸಕ ಎ.ಎಸ್.ಪೊನ್ನಣ್ಣ ಅವರ ಮೊರೆ ಹೋಗಿದ್ದರು. ಆಸ್ಪತ್ರೆ ಉನ್ನತ ಅಧಿಕಾರಿಗಳ ಜತೆ ಮಾತನಾಡಿದ ಶಾಸಕರು, ಶಸ್ತ್ರ ಚಿಕಿತ್ಸೆ ಮಾಡುವಂತೆ ಸೂಚಿಸಿ, ಚಿಕಿತ್ಸೆಗೆ ಬೇಕಾದ ಹಣವನ್ನು ಆಯುಷ್ಮಾನ್ ಭಾರತ ಅರೋಗ್ಯ ಕರ್ನಾಟಕ ಯೋಜನೆ ಮುಖಾಂತರ ಹಣ ಪಾವತಿ ಮಾಡಲು ತಿಳಿಸಿದರು.

ಶಾಸಕರ ಆಪ್ತರಾದ ಚೋಕಂಡ ಸಂಜು ಸುಬ್ಬಯ್ಯ ಅವರಿಗೆ ಚಿಕಿತ್ಸೆ ಸಂಪೂರ್ಣ ಜವಾಬ್ದಾರಿ ನೀಡಿದರು. ಅಣ್ಣಪ್ಪ ಅವರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಮುಗಿದ ಬಳಿಕ ಅವರನ್ನು ಮರಳಿ ಕರೆದುಕೊಂಡು ಬರುವವರೆಗೂ ಸಂಜು ಸುಬ್ಬಯ್ಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಅಣ್ಣಪ್ಪ ಅವರನ್ನು ಮನೆಗೆ ಸೇರಿಸುವಲ್ಲಿ ಯಶಸ್ವಿಯಾದರು.

ಭಾನುವಾರ ಅಣ್ಣಪ್ಪ ಕುಟುಂಬದ ಎಲ್ಲ ಸದಸ್ಯರು ಎ.ಎಸ್.ಪೊನ್ನಣ್ಣ ಅವರ ವಿರಾಜಪೇಟೆ ನಿವಾಸಕ್ಕೆ ಆಗಮಿಸಿ ಕೃತಜ್ಞತೆ ಸಲ್ಲಿಸಿದರು. ಅಣ್ಣಪ್ಪ ಅವರ ಕುಟುಂಬಕ್ಕೆ ಧೈರ್ಯ ತುಂಬಿದ ಶಾಸಕರು, ವೈಯಕ್ತಿಕ ಧನಸಹಾಯ ಮಾಡಿದರು.

ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಪಟ್ಟಡ ರಂಜಿ ಪೂಣಚ್ಚ , ಕುಂದಚ್ಚಿರ ಮಂಜು, ಪುರಸಭೆ ಉಪಾಧ್ಯಕ್ಷೆ ಫಸಿಯಾ ತಬ್ಸುಂ, ಚೆನ್ನಯನಕೋಟೆಯ ಕಾಂಗ್ರೆಸ್ ಕಾರ್ಯಕರ್ತರಾದ ಮನು, ರವೀಂದ್ರ ಬಾವೆ, ಪ್ರಕಾಶ್, ಅಣ್ಣಪ್ಪ ಅವರ ಪತ್ನಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net