

ಶ್ರೀರಂಗಪಟ್ಟಣ: ಪಟ್ಟಣ ವ್ಯಾಪ್ತಿಯ ವಿವಿಧ ವಾರ್ಡ್‌ಗಳ ಮನೆ ಮನೆಗಳ ಬಾಗಿಲಿಗೆ ಕ್ಷೇತ್ರದ ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಮಂಗಳವಾರ ಮುಂಜಾನೆ ವಿವಿಧ ಸರ್ಕಾರಿ ಅಧಿಕಾರಿಗಳೊಂದಿಗೆ ಖುದ್ದು ಭೇಟಿ ನೀಡಿ ಪುರಜನರ ಸಮಸ್ಯೆ ಆಲಿಸಿದರು.
ಪಟ್ಟಣದ 14ನೇ ವಾರ್ಡ್‌ನ ಭೋವಿ ಕಾಲನಿಯಿಂದ ಪುರಸಭೆಯ ಪ್ರಭಾರ ಅಧ್ಯಕ್ಷ ಎಂ.ಎಲ್.ದಿನೇಶ್ ಅವರೊಂದಿಗೆ ಪಾದಾಯಾತ್ರೆ ಆರಂಭಿಸಿದ ಶಾಸಕ ರಮೇಶ ಬಂಡಿಸಿದ್ದೇಗೌಡ, ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಉಂಟಾಗಿರುವ ಹಾನಿ ಹಾಗೂ ಪ್ರಮುಖವಾಗಿ ಪಟ್ಟಣದಲ್ಲಿ ಆಗಬೇಕಿರುವ ಕಾಮಗಾರಿಗಳು, ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ತಹಸೀಲ್ದಾರ್, ಪುರಸಭೆ ಮುಖ್ಯಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿ, ಲೋಕೋಪಯೋಗಿ ಎಇಇ, ಸೆಸ್ಕ್‌ನ ಎಇಇ, ಸ್ಲಂ ಬೋರ್ಡ್ ಮತ್ತು ನೀರಾವರಿ ಇಲಾಖೆ ಸೇರಿದಂತೆ ಪುರಸಭೆ ಹಾಗೂ ತಾಲೂಕು ಆಡಳಿತದ ಎಲ್ಲ ಇಲಾಖೆ ಅಧಿಕಾರಿ-ಸಿಬ್ಬಂದಿಯೊಂದಿಗೆ 4 ತಾಸುಗಳ ಕಾಲ ಎಲ್ಲಡೆ ಸಂಚರಿಸಿ ಮಾಹಿತಿ ಪಡೆದರು.
ಪಟ್ಟಣ ವ್ಯಾಪ್ತಿಯ ವಿವಿಧೆಡೆ ನಿರಂತರ ಮಳೆಗೆ ಶಿಥಿಲಗೊಂಡು ಕುಸಿಯುವ ಹಂತಕ್ಕೆ ತಲುಪಿರುವ ಬಡಜನರ ಮಣ್ಣಿನ ಗೋಡೆಗಳ ಮನೆಗಳನ್ನು ಪಟ್ಟಿ ಮಾಡಿ ಶೀಘ್ರ ಪುರಸಭೆ ಮತ್ತು ಸ್ಲಂ ಬೋರ್ಡ್ ಜಂಟಿಯಾಗಿ ಇರುವ ಅನುದಾನದಲ್ಲಿ ದುರಸ್ತಿಪಡಿಸಲು ಸಹಕಾರ ನೀಡುವಂತೆ ಸೂಚನೆ ನೀಡಿದರು.
ಇನ್ನು ಮಳೆಗೆ ಕುಸಿದ ಮನೆಗಳನ್ನು ತಾಲೂಕು ಆಡಳಿತದಲ್ಲಿ ಲಭ್ಯ ಇರುವ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಅನುದಾನಗಳಿಂದ ತುರ್ತು ಪರಿಸ್ಥಿತಿಗೆ ಪರಿಹಾರ ನೀಡಿ ಸೂಕ್ತ ಸೂರು ನಿರ್ಮಿಸಿಕೊಳ್ಳಲು ನೆರವಾಗಿ ಎಂದು ತಹಸೀಲ್ದಾರ್ ಅವರಿಗೆ ನಿರ್ದೇಶನ ನೀಡಿದರು.
7 ಮತ್ತು 6ನೇ ವಾರ್ಡ್‌ಗಳ ನಿವಾಸಿಗಳಿಂದ ಕೇಳಿ ಬಂದ ಕುಡಿಯುವ ನೀರು ಪೂರೈಕೆಯ ಸಮಸ್ಯೆಗೆ ಸ್ಪಂದಿಸಿದ ಶಾಸಕರು, ತ್ವರಿತವಾಗಿ ಕ್ರಮ ವಹಿಸುವಂತೆ ಈ ವೇಳೆ ಅಧಿಕಾರಿಗಳಿಗೆ ಸೂಚಿಸಿದರು. ಇನ್ನು 13, 11, 9, 6, 7, 4, 3ರ ವಾರ್ಡ್‌ಗಳಲ್ಲಿ ಸಂಚರಿಸಿದ ಶಾಸಕ ರಮೇಶ ಬಂಡಿಸಿದ್ದೇಗೌಡ, ವಿವಿಧ ಬೀದಿಗಳಲ್ಲಿ ಅವಶ್ಯ ಇರುವ ರಸ್ತೆ ಅಭಿವೃದ್ಧಿ, ಚರಂಡಿಗಳ ನಿರ್ಮಾಣ, ಮಳೆ-ಗಾಳಿಯಿಂದ ವಾಲಿಕೊಂಡ ವಿದ್ಯುತ್ ಕಂಬಗಳು, ವಿದ್ಯುತ್ ಲೈನ್‌ಗಳ ದುರಸ್ತಿ ಹಾಗೂ ಸ್ವಚ್ಛತೆ ಜತೆಗೆ ಪುರಜನರ ಮನೆಗಳ ಕೊಳಾಯಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ, ಆರೋಗ್ಯ ಸುರಕ್ಷತೆಗೆ ಸೊಳ್ಳೆ-ನೊಣಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಂಬಂಧಪಟ್ಟ ಎಲ್ಲ ಇಲಾಖೆಯವರು ಗಮನಹರಿಸುವಂತೆ ಅಧಿಕಾರಿ-ಸಿಬ್ಬಂದಿಗೆ ತಾಕೀತು ಮಾಡಿದರು.
ಪಟ್ಟಣ ಪೊಲೀಸ್ ವಸತಿಗೃಹಗಳ ಹಿಂಭಾಗದ ನಿವೇಶನಗಳಲ್ಲಿ ಕೆಲ ಮುಸ್ಲಿಂ ಬಡ ಕುಟುಂಬಗಳು ಸಾಕಷ್ಟು ವರ್ಷದಿಂದ ಅಲ್ಲೇ ವಾಸ ಮಾಡುತ್ತಿದ್ದು, ಅವರ ಪೂರ್ವಪರ ಹಿನ್ನೆಲೆ ಕುರಿತು ಪುರಸಭಾ ಅಧಿಕಾರಿಗಳು ಪ್ರಾಮಾಣಿಕವಾಗಿ ಪರಿಶೀಲನೆ ನಡೆಸಿ ಅವರ ನಿವೇಶನಗಳಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಇನ್ನು ಪಟ್ಟಣದ ಮುಖ್ಯರಸ್ತೆಯಲ್ಲಿ ಪರಿಸರ ವಿಕೋಪಕ್ಕೆ ಮನೆ ಕಳೆದುಕೊಂಡು ಮುರಿದ ಮನೆಯಲ್ಲೇ ವಾಸ ಮಾಡುತ್ತಿದ್ದ ಬಡ ನಿವಾಸಿಗಳಿಗೆ ಮಿಡಿದ ಶಾಸಕ ರಮೇಶ ಬಂಡಿಸಿದ್ದೇಗೌಡ, ಸ್ಥಳಕ್ಕೆ ಆಗಮಿಸಿದ ಪಟ್ಟಣದ 3ನೇ ಅಪರ ಮತ್ತ ಸತ್ರ ನ್ಯಾಯಧೀಶ ಗೋಪಾಲಕೃಷ್ಣ ರೈ ಅವರೊಂದಿಗೆ ಜಂಟಿಯಾಗಿ ಪರಿಶೀಲನೆ ನಡೆಸಿ ಪುರಸಭೆ ಮತ್ತು ತಾಲೂಕು ಆಡಳಿತ ಮುರಿದು ಬಿದ್ದ ಮನೆಯ ಅವಶೇಷಗಳನ್ನು ತೆರವು ಮಾಡಿ ತುರ್ತಾಗಿ ಮನೆ ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳಿಕ ಪಟ್ಟಣ ಪುರಸಭೆಯ ಸಭಾಂಗಣದಲ್ಲಿ ಎಲ್ಲ ಅಧಿಕಾರಿ-ಸಿಬ್ಬಂದಿಯೊಂದಿಗೆ ಚರ್ಚಿಸಿದ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ, ಪಟ್ಟಣದ ಒಳಚರಂಡಿ ಸಮಸ್ಯೆ ಬಗೆಹರಿಸಲು ವಿವಿಧ ಯೋಜನೆಯಡಿ ಕೆಯುಡಿಎಫ್‌ಸಿ ಯುಜಿಡಿ ಹೊಸ ಮಾರ್ಗ ನಿರ್ಮಾಣಕ್ಕೆ 25.60 ಕೋಟಿ ರೂ., ಕುಡಿಯುವ ನೀರು ಪೂರೈಕೆಗೆ ಕೆಯುಡಬ್ಲುೃಎಸ್‌ಎಸ್‌ನಡಿ 22 ಕೋಟಿ ರೂ. ಅನುದಾನ ತಂದಿದ್ದು, ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈಗಿರುವ ನೀರು ಸರಬರಾಜು 1 ಘಟಕದ ಜತೆಗೆ ವೆಲ್ಲೇಸ್ಲೀ ಸೇತುವೆ ಬಳಿ ಇರುವ ಮತ್ತೊಂದು ಘಟಕದಿಂದಲೂ ಪಟ್ಟಣಕ್ಕೆ ನೀರು ಪೂರೈಸುವ ಕಾರ್ಯ ಆರಂಭಿಸಿ, ಪಟ್ಟಣದ ಬತ್ತೇರಿ ಬಳಿಯ ನೀರು ಶುದ್ಧೀಕರಣ ಘಟಕವನ್ನು ಸಹ ಅತ್ಯಾಧುನಿಕವಾಗಿ ನವೀಕರಣಗೊಳಿಸಿ 24*7 ಯೋಜನೆಯಡಿ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪುರಸಭಾ ಸದಸ್ಯರಾದ ಎಸ್.ಎನ್.ದಯಾನಂದ್, ಎಂ.ನಂದೀಶ್, ಎಸ್.ನಂದೀಶ್, ಗಂಜಾಂ ಕೃಷ್ಣಪ್ಪ, ಗಂಜಾಂ ಶಿವು, ಎಸ್.ಟಿ.ರಾಜು, ಮುಖ್ಯಾಧಿಕಾರಿ ಎಂ.ರಾಜಣ್ಣ, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾಪಂ ಇಒ ವೇಣು, ಪಿಡಬ್ಲುೃಡಿ ಎಇಇ ಜಸ್ವಂತ್ ಪಂಡಿಂತ್, ಟಿಎಚ್‌ಒ ಆಶಾಲತಾ, ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪಿ.ಮಾರುತಿ, ತಾಲೂಕು ಪಶು ವೈದ್ಯಾಧಿಕಾರಿ ಸುರೇಶ್, ಸಮಾಜ ಕಲ್ಯಾಣಾಧಿಕಾರಿ ಮೇಘನಾ, ಆರ್‌ಎಫ್‌ಒ ವಿನೋದ್, ಹಿಂದುಳಿದ ವರ್ಗಗಳ ಇಲಾಖೆಯ ತಾಲೂಕು ಕಲ್ಯಾಣಾಧಿಕಾರಿ, ತಾಲೂಕು ಕಾರ್ಮಿಕ ನೀರಿಕ್ಷಕ ಹೇಮಚಂದ್ರ ಜ್ಯೋತಿ ಪ್ರಕಾಶ್ ಇತರರು ಇದ್ದರು.