ಆಶೋಕ್ ರೈಗೆ ಭವ್ಯ ಸ್ವಾಗತ - ದೇವಳ, ಚರ್ಚ್, ಮಸೀದಿ ಭೇಟಿ

PTR_8 MAR_1
Published on

ಪುತ್ತೂರು: ಸೇಡಿಯಾಪಿನಲ್ಲಿ ಮೀಸಲಿರಿಸಿದ ಜಾಗದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯ ಘೋಷಣೆಗೆ ಅವಿರತ ಶ್ರಮಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ವಿಟ್ಲ, ಉಪ್ಪಿನಂಗಡಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಬಕದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.

ಕ್ರೇನ್ ಮೂಲಕ ಬೃಹತ್ ಹೂಮಾಲೆಯನ್ನು ಅಶೋಕ್ ಕುಮಾರ್ ರೈ ಅವರಿಗೆ ಹಾಕುವ ಮೂಲಕ ಕಬಕದಲ್ಲಿ ಸ್ವಾಗತಿಸಲಾಯಿತು. ಕಬಕದಿಂದ ಪುತ್ತೂರಿನವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಗೊಂಬೆ ಕುಣಿತ, ಬ್ಯಾಂಡ್ ಮೂಲಕ ಮೆರುಗು ನೀಡಲಾಯಿತು. ವಾಹನಗಳು ಜಾಥಾದಲ್ಲಿ ಪಾಲ್ಗೊಂಡವು.

ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಪುತ್ತೂರು ಮಾಯ್ ದೆ ದೇವುಸ್ ಚರ್ಚ್‌ಗೆ ತೆರಳಿ ಧರ್ಮ ಗುರುಗಳೊಂದಿಗೆ ಮಾತುಕತೆ ನಡೆಸಿದರು. ಪುತ್ತೂರು ಕೇಂದ್ರ ಜುಮ್ಮಾ ಮಸೀದಿಗೆ ಭೇಟಿ ನೀಡಿ ತಂಙಳರ ಮಕ್ಬರ ಸಂದರ್ಶನ ನಡೆಸಿದರು.

ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ.ತೌಸಿಪ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪುತ್ತೂರು ವಿಧಾನಸಭಾ ಕ್ಷೇತ್ರದ ಯೂತ್ ಅಧ್ಯಕ್ಷ ಪಾರೂಕ್ ಪೆರ್ನೆ, ಅಕ್ರಮ ಸಕ್ರಮ ಸಮಿತಿಯ ಸದಸ್ಯ ರಾಮಣ್ಣ ಪಿಲಿಂಜ, ಮುಖಂಡರಾದ ಎಂ. ಬಿ. ವಿಶ್ವನಾಥ ರೈ, ಮುರಳೀಧರ ರೈ ಮಠಂತಬೆಟ್ಟು, ಡಾ. ರಾಜಾರಾಮ ಕೆ.ಬಿ., ಎನ್. ಚಂದ್ರಹಾಸ ಶೆಟ್ಟಿ, ಎಂ. ಎಸ್. ಮಹಮ್ಮದ್, ಮೋಹನ್ ಗುರ್ಜಿನಡ್ಕ, ಅಬ್ದುಲ್ ರಹಿಮಾನ್ ನೆಲ್ಲಿಗುಡ್ಡೆ, ಶ್ರೀಧರ ಬಾಳೆಕಲ್ಲು ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net