ಜಿಲ್ಲಾಸ್ಪತ್ರೆಗೆ ಸೌಕರ್ಯ ಕಲ್ಪಿಸಲು ಬದ್ಧ

MLA Vist Kolar Govt Hospital
ಕೋಲಾರ ನಗರದ ಜಿಲ್ಲಾಸ್ಪತ್ರೆಗೆ ಶಾಸಕ ಕೊತ್ತೂರು ಮಂಜುನಾಥ್​ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಎಂಎಲ್​ಸಿ ಅನಿಲ್​ಕುಮಾರ್​, ಜಿಲ್ಲಾ ಸರ್ಜನ್​ ಡಾ.ವಿಜಯಕುಮಾರ್​ ಇದ್ದರು.
Published on

ಶಾಸಕ ಕೊತ್ತೂರು ಮಂಜುನಾಥ್​, ಎಂಎಲ್​ಸಿ ಅನಿಲ್​ಕುಮಾರ್​ ಭೇಟಿ, ಪರಿಶೀಲನೆ

ಕೋಲಾರ: ನಗರದ ಜಿಲ್ಲಾಸ್ಪತ್ರೆಗೆ ಹೊರ ಜಿಲ್ಲೆಗಳಿಂದಲೂ ರೋಗಿಗಳು ಬರುತ್ತಿರುವುದರಿಂದ ಆಸ್ಪತ್ರೆಗೆ ಹಂತ ಹಂತವಾಗಿ ಮೂಲಸೌಲಭ್ಯಗಳನ್ನು ಕಲ್ಪಿಸುವುದರ ಜತೆಗೆ ಬೇಡಿಕೆಗೆ ತಕ್ಕಂತೆ 5 ಡಯಾಲಿಸಿಸ್​ ಯಂತ್ರಗಳನ್ನು ದಾನಿಗಳಿಂದ ಕೊಡಿಸಲಾಗುವುದು ಎಂದು ಶಾಸಕ ಕೊತ್ತೂರು ಮಂಜುನಾಥ್​ ತಿಳಿಸಿದರು.
ಸೋಮವಾರ ನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ವೈದ್ಯರ&ದಾದಿಯರ ಹಾಗೂ ರೋಗಿಗಳ ಬಳಿ ಸಮಸ್ಯೆಗಳನ್ನು ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಪಕ್ಕದ ಆಂಧ್ರಪ್ರದೇಶದ ಮದನಪಲ್ಲಿ, ಫಲಮನೇರು, ಚಿತ್ತೂರು ಜಿಲ್ಲೆಗಳಿಂದ ರೋಗಿಗಳು ಈ ಆಸ್ಪತ್ರೆಗೆ ಬರುತ್ತಿದ್ದಾರೆ. ನಾನು ಶಾಸಕನಾಗಿ ಆಯ್ಕೆಯಾದ ನಂತರ ಇದೇ ಪ್ರಥಮ ಬಾರಿಗೆ ಭೇಟಿ ನೀಡುತ್ತಿದ್ದೇನೆ, ಅಧಿವೇಶನ ಇದ್ದ ಕಾರಣ ಬರಲಾಗಲಿಲ್ಲ. ಇನ್ಮುಂದೆ ತಿಂಗಳಲ್ಲಿ ಒಂದು ದಿನ ಬೆಳಗ್ಗೆ 7ರಿಂದ ಸಂಜೆ 8ರ ತನಕ ಆಸ್ಪತ್ರೆಯಲ್ಲಿ ನಾನು ಮತ್ತು ಎಂಎಲ್​ಸಿ ಅನಿಲ್​ಕುಮಾರ್​ ಇದ್ದು ಸಮಸ್ಯೆಗಳನ್ನು ಆಲಿಸುವ ಕೆಲಸ ಮಾಡಲಾಗುವುದು ಎಂದರು

ಆಸ್ಪತ್ರೆಗೆ 5 ಡಯಾಲಿಸಿಸ್​ ಯಂತ್ರ
ಡಯಾಲಿಸಿಸ್​ಗೆ 6 ಯಂತ್ರಗಳಿದ್ದು, ಅವು ಸಾಕಾಗುತ್ತಿಲ್ಲವೆಂದು ಜಿಲ್ಲಾ ಸರ್ಜನ್​ ಡಾ.ವಿಜಯಕುಮಾರ್​ ತಿಳಿಸಿದ್ದಾರೆ. ದಾನಿಗಳಿಂದ 5 ಡಯಾಲಿಸಿಸ್​ ಯಂತ್ರಗಳನ್ನು ಉಚಿತವಾಗಿ ಜಿಲ್ಲಾ ಸರ್ಜನ್​ ಹೇಳಿದ ದಿವಸ ಆಸ್ಪತ್ರೆಯಲ್ಲಿ ಅಳವಡಿಸಿ ಹೋಗುತ್ತಾರೆ ಎಂದು ಶಾಸಕ ಕೊತ್ತೂರು ಮಂಜುನಾಥ್​ ಹೇಳಿದರು.


ಶುದ್ಧ ಕುಡಿಯುವ ನೀರಿನ ಟಕ ಆರಂಭ
ಆಸ್ಪತ್ರೆ ಆವರಣದ ಶುದ್ಧ ಕುಡಿಯುವ ನೀರಿನ ಟಕ ಶಿಥಿಲಗೊಂಡಿರುವುದು ನನ್ನ ಗಮನಕ್ಕೆ ತಂದಿದ್ದಾರೆ. ನನ್ನ ಅನುದಾನದಲ್ಲಿ ಮಂಗಳವಾರದಿಂದಲೇ ಶುದ್ಧ ಕುಡಿಯವ ನೀರಿನ ಟಕ ಅಳವಡಿಸಲು ಸೂಚಿಸಲಾಗಿದೆ. ಆಸ್ಪತ್ರೆಗೆ ನೀರಿನ ಆಭಾವವಿದೆ ಅದನ್ನು ನೀಗಿಸಲು ಪಕ್ಕದಲ್ಲೇ ಇರುವ ಪ್ರವಾಸಿ ಮಂದಿರದ ಕೊಳವೆಬಾವಿಯಿಂದ ನೀರು ಪೂರೈಸುವಂತೆ ಸೂಚಿಸಲಾಗಿದೆ ಎಂದು ಕೊತ್ತೂರು ಮಂಜುನಾಥ್​ ಹೇಳಿದರು.

ಆಸ್ಪತ್ರೆ ವೀಸುವ ಸಂದರ್ಭದಲ್ಲಿ ಹೊರ ರೋಗಿಗಳು ಚೀಟಿ ಬರೆಯಿಸಿಕೊಳ್ಳಲು ಹಾಗೂ ವೈದ್ಯರ ಕೊಠಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಂತಿರುವುದು ಕಂಡು ಬಂತು. ಇನ್ಮುಂದೆ ಇದಕ್ಕೆ ಅವಕಾಶವಿಲ್ಲದ್ದಂತೆ ಸಿಬ್ಬಂದಿ ಮತ್ತು ವೈದ್ಯರ ಸಂಖ್ಯೆಯನ್ನು ಹೆಚ್ಚಿಸುವ ಕೆಲಸ ಮಾಡಲಾಗುವುದು. ಆಗ ರೋಗಿಗಳು ಸರದಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ. ಹಂತ ಹಂತವಾಗಿ ಆಸ್ಪತ್ರೆಗೆ ಆವಶ್ಯಕತೆಯಿರುವ ಉಪಕರಣ ಹಾಗೂ ಮೂಲಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದರು.


ಖಾಸಗಿ ಅಂಗಡಿಗಳನ್ನು ಖಾಲಿ ಮಾಡಿಸಿ
ಆಂಬುಲೆನ್ಸ್​ಗಳು ರೋಗಿ ಕಡೆಯಿಂದ 500 ರೂಪಾಯಿ ಪಡೆಯುತ್ತಾರೆ ಹಾಗೂ ದಲ್ಲಾಳಿಗಳು ಖಾಸಗಿ ಆಂಬುಲೆನ್ಸ್​ಗಳಿಗೆ ರೋಗಿಗಳನ್ನು ಶಿಫಾರಸು ಮಾಡಿಸುತ್ತಾರೆ. ಆವರಣದಲ್ಲಿ ತಲೆಯೆತ್ತಿರುವ ಬಟ್ಟೆ ಅಂಗಡಿಗಳನ್ನು ದಲ್ಲಾಳಿಗಳು ರೋಗಿಗಳಿಂದ ವ್ಯವಹಾರ ಕುದರಿಸಿ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ಕಳುಹಿಸುವ ವ್ಯವಸ್ಥೆ ಮಾಡುತ್ತಿದ್ದಾರೆಂದು ಶಾಸಕರ ಗಮನಕ್ಕೆ ತಂದಾಗ ಖಾಸಗಿ ಅಂಗಡಿಗಳನ್ನು ಖಾಲಿ ಮಾಡಿಸುವುದಾಗಿ ಜಿಲ್ಲಾ ಸರ್ಜನ್​ ಡಾ.ವಿಜಯಕುಮಾರ್​ ಭರವಸೆ ನೀಡಿದರು. ಇನ್ನು ಮುಂದೆ ಆಸ್ಪತ್ರೆಯಲ್ಲಿ ದಲ್ಲಾಳಿ ವ್ಯವಹಾರಕ್ಕೆ ಕಡಿವಾಣ ಹಾಕುವಂತೆ ಶಾಸಕ ಕೊತ್ತೂರು ಮಂಜುನಾಥ್​ ಸೂಚಿಸಿದರಲ್ಲದೆ ಹೊರ ಜಿಲ್ಲೆಗಳಿಂದ ರೋಗಿಗಳು ಬರುತ್ತಿದ್ದಾರೆ ಇದನ್ನು ಹೀಗೆ ಮುಂದುವರಿಸಿಕೊಂಡು ಹೋಗಬೇಕು ಎಂದು ಎಚ್ಚರಿಕೆ ನೀಡಿದರು.
ಮಕ್ಕಳ ತ ಡಾ.ಬಾಲಸುಂದರ್​, ಮುಖಂಡರಾದ ವೈ.ಶಿವಕುಮಾರ್​, ಚಂಜಿಮಲೆ ರಮೇಶ್​, ಜನ್ನಪ್ಪನಹಳ್ಳಿ ನವೀನ್​ಕುಮಾರ್​, ಸುಗಟೂರು ಎಸ್​ಎಫ್​ಎಸ್​ ಅಧ್ಯಕ್ಷ ಅಂಕತಟ್ಟಿ ಬಾಬು ಇದ್ದರು.

ಸರ್ಕಾರ ಸುಭದ್ರವಾಗಿದೆ
ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರವನ್ನು ಪತನಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್​ ಶಾಸಕರು ಗಟ್ಟಿಯಾಗಿದ್ದಾರೆ. ಅವರನ್ನು ಅಲ್ಲಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್​ ಗಟ್ಟಿಯಾಗಿ ನಿಂತಿದ್ದಾರೆ ಅವರಿರುವ ತನಕ ಕಾಂಗ್ರೆಸ್​ನ್ನು ಉರುಳಿಸಲು ಸಾಧ್ಯವಿಲ್ಲ ಎಂದು ಶಾಸಕ ಕೊತ್ತೂರು ಮಂಜುನಾಥ್​ ಹೇಳಿದರು.
ಕಾಂಗ್ರೆಸ್​ ಸರ್ಕಾರವನ್ನು ಉರುಳಿಸಲು ವಿದೇಶದಲ್ಲಿ ಕುಳಿತು ತಂತ್ರ ಮಾಡುತ್ತಿದ್ದಾರೆಂಬ ಡಿ.ಕೆ.ಶಿವಕುಮಾರ್​ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್​ ಸರ್ಕಾರವನ್ನು ಉರುಳಿಸುವ ಕನಸು ಕಾಣುತ್ತಿದ್ದಾರೆ, ರಾಜ್ಯದಲ್ಲಿ ಸರ್ಕಾರ ಸುಭದ್ರವಾಗಿದೆ, 5 ಗ್ಯಾರಂಟಿಗಳನ್ನು ಹಂತ ಹಂತವಾಗಿ ಈಡೇರಿಸಲಾಗುತ್ತಿದೆ ಎಂದರು. ಮಾಜಿ ಸ್ಪೀಕರ್​ ರಮೇಶ್​ಕುಮಾರ್​ ಅವರಿಗೆ ರಾಜ್ಯಸಭಾ ಸದಸ್ಯರನ್ನಾಗಿ ಮಾಡಲು ಜಿಲ್ಲೆಯ ಶಾಸಕರು ಒತ್ತಾಯಪಡಿಸುತ್ತಿದ್ದಾರೆಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಸಕ ಕೊತ್ತೂರು ಮಂಜುನಾಥ್​, ರಮೇಶ್​ ಕುಮಾರ್​ ಯಾವುದೇ ಸ್ಥಾನಮಾನ ಬೇಕೆಂದು ಕೇಳಿದರೆ ಶಿಳ್ಳೆ ಹೊಡೆದಂತೆ ಬರುತ್ತದೆ. ಅವರು ಇದುವರೆಗೂ ಯಾವುದೇ ಸ್ಥಾನಮಾನ ಬೇಕೆಂದು ಕೇಳಿಲ್ಲ. ಅವರು ಆ ರೀತಿಯಾಗಿ ಕೇಳುವ ಜಾಯಮಾನ ಅವರಲ್ಲಿಲ್ಲ ಎಂದರು.

ಆಸ್ಪತ್ರೆ ಆವರಣದಲ್ಲಿ ಪಾರ್ಕಿಂಗ್​ ವ್ಯವಸ್ಥೆ ಕಲ್ಪಿಸಲು ಆಸ್ಪತ್ರೆ ಸಿಬ್ಬಂದಿ ಮತ್ತು ಜನಪ್ರತಿನಿಧಿಗಳು ಹೇಳಿದರೆ ಜನ ಕೇಳುವುದಿಲ್ಲ, ಇದಕ್ಕೆ ಪೊಲೀಸರೇ ಮುಖ್ಯ, ಪೊಲೀಸರಿಂದಲೇ ಪಾರ್ಕಿಂಗ್​ ವ್ಯವಸ್ಥೆ ಕಲ್ಪಿಸಲಾಗುವುದು.

| ಕೊತ್ತೂರು ಮಂಜುನಾಥ್​, ಶಾಸಕ.


ಸರ್ಕಾರಿ ಆಸ್ಪತ್ರೆಗೆ ಹಂತ ಹಂತವಾಗಿ ಮೂಲಸೌಲಭ್ಯಗಳನ್ನು ಕಲ್ಪಿಸಲಾಗುವುದು. ಒಂದೇ ಬಾರಿಗೆ ಸರಿಪಡಿಸಲು ಸಾಧ್ಯವಿಲ್ಲ. 8 ವರ್ಷದಿಂದ ಶಾಸಕರ ಅಧ್ಯಕ್ಷತೆಯಲ್ಲಿ ಕುಂದು ಕೊರತೆಗಳ ಸಭೆ ನಡೆದಿಲ್ಲ ಎಂದು ಜಿಲ್ಲಾ ಸರ್ಜನ್​ ಹೇಳುತ್ತಿದ್ದಾರೆ. ಆದ್ದರಿಂದ ಸಮಸ್ಯೆಗಳ ಅಗರ ಹೆಚ್ಚಾಗಿದೆ. ಇನ್ನು ಮುಂದೆ ಪ್ರತಿ ತಿಂಗಳ ಶಾಸಕರು ನಾನು ಆಸ್ಪತ್ರೆಗೆ ಭೇಟಿ ನೀಡಿ ಸಮಸ್ಯೆಗಳ ಕಡೆ ಗಮನಹರಿಸಲಾಗುವುದು.

| ಎಂ.ಎಲ್​.ಅನಿಲ್​ಕುಮಾರ್​, ಎಂಎಲ್​ಸಿ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net