ಸರ್ವೀಸ್ ರಸ್ತೆ ಅಧ್ವಾನ ಸರಿಪಡಿಸಿ: ಹಳೇ ಬೂದನೂರು ಗ್ರಾಮಸ್ಥರ ಆಗ್ರಹ

MLA visits Hale Budanur village Mandya
Published on

ಮಂಡ್ಯ: ಶಾಸಕ ರವಿಕುಮಾರ್ ಗಣಿಗ ಹಾಗೂ ಅಧಿಕಾರಿಗಳ ತಂಡ ಗುರುವಾರ ತಾಲೂಕಿನ ಹಳೇ ಬೂದನೂರು ಗ್ರಾಮಕ್ಕೆ ಭೇಟಿ ನೀಡಿ ಸರ್ವೀಸ್ ರಸ್ತೆಯನ್ನು ಪರಿಶೀಲಿಸಿದರು. ಈ ವೇಳೆ ಹಲವು ಸಮಸ್ಯೆಗಳನ್ನು ಗ್ರಾಮಸ್ಥರು ಬಿಚ್ಚಿಟ್ಟರು.

ಹೆದ್ದಾರಿಯ ಎರಡು ಭಾಗದಲ್ಲಿ ಸ್ಥಳೀಯರು ಹಾಗೂ ಟೋಲ್ ಪಾವತಿಸದ ಸಾರ್ವಜನಿಕರು ಓಡಾಡಲು ಸರ್ವೀಸ್ ರಸ್ತೆ ನಿರ್ಮಿಸಿರುವುದು ಸರಿಯಾಗಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ದೇಶನದಂತೆ ಡಿಬಿಎಲ್ ಕಂಪನಿ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿದೆ. ಪರಿಣಾಮ ಸರ್ವೀಸ್ ರಸ್ತೆ ಪ್ರಯಾಣ ಜೀವಭಯ ಹುಟ್ಟಿಸುತ್ತಿದೆ. ನೂರಾರು ಸಮಸ್ಯೆ ನಡುವೆ ನಾವು ಬದುಕುತ್ತಿದ್ದೇವೆಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಕೇವಲ ಪತ್ರ ವ್ಯವಹಾರ ಮಾಡದೇ ಕಾಲ ಮಿತಿಯಲ್ಲಿ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಭೂಸ್ವಾಧೀನ ಮಾಡಿಕೊಂಡಿರುವ ಭೂಮಿ ತೆರವುಗೊಳಿಸಬೇಕು. ಪದಾಚಾರಿ ರಸ್ತೆ, ಕುಡಿಯುವ ನೀರಿನ ಮಾರ್ಗ ಹಾಗೂ ಇನ್ನಿತರ ಸೌಲಭ್ಯಕ್ಕೆ ತೆರವುಗೊಂಡಿರುವ ಸ್ಥಳ ಕಾಯ್ದಿರಿಸಬೇಕು. ಈಗಾಗಲೇ ಅನುಮೋದನೆಗೊಂಡಿರುವ ಪದಾಚಾರಿ ಮೇಲ್ಸೆತುವೆ ಕಾಮಗಾರಿ ತ್ವರಿತವಾಗಿ ಮುಗಿಯಬೇಕು. ರಸ್ತೆಯಲ್ಲಿ ಸಂಚಾರಿ ನಿಯಮ ಅನುಸಾರ ರಸ್ತೆ ವಿನ್ಯಾಸಗೊಳಿಸಬೇಕು. ಬಸ್ ಬೇ, ಬಸ್ ನಿಲ್ದಾಣ, ಶೌಚಗೃಹ ನಿರ್ಮಾಣಕ್ಕೆ ಆಗ್ರಹಿಸಿದರು.

ಸರ್ವೀಸ್ ರಸ್ತೆಯಲ್ಲಿ ಬೀದಿದೀಪ ಹಾಗೂ ಸಿಸಿ ಕ್ಯಾಮರಾ ಅಳವಡಿಕೆಯಾಗಬೇಕು. ಅದಕ್ಕೆ ಪೂರಕವಾಗಿ ಬ್ಯಾಟರಿ ಚಾಲಿತ ವ್ಯವಸ್ಥೆಯಾಗಬೇಕು. ರಸ್ತೆ ಬದಿ ಚರಂಡಿಯ ಕೊಳಚೆ ನೀರು ಕೆರೆ, ಕಾಲುವೆ ಸೇರಿ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಈ ಬಗ್ಗೆ ಅಗತ್ಯ ಕ್ರಮ ವಹಿಸಬೇಕು. ಸರ್ವೀಸ್ ರಸ್ತೆ ಬದಿ ಚರಂಡಿ ಮೇಲೆ ಹಾಕಿರುವ ಸ್ಲಬ್‌ಗಳು ಪೂರ್ಣವಾಗಿಲ್ಲ. ನಡೆದಾಡಲು ಅನುವಾಗುವಂತೆ ಸ್ಲಬ್ ಅಳವಡಿಸಬೇಕು ಎಂದು ಆಗ್ರಹಿಸಿದರು. ಅಂತೆಯೇ ಪ್ರಾಧಿಕಾರದ ಇಂಜಿನಿಯರ್ ಹಾಜರಿಗೆ ಆಕ್ಷೇಪ ವ್ಯಕ್ತಪಡಿಸಿ, ಯೋಜನಾ ನಿರ್ದೇಶಕ ಹಾಗೂ ಭೂಸ್ವಾಧೀನಾಧಿಕಾರಿ ಹಾಜರಾಗುವಂತೆ ಸೂಚಿಸಲು ಒತ್ತಡ ಹಾಕಿದರು.

ಜಿಲ್ಲಾಧಿಕಾರಿ ಡಾ.ಕುಮಾರ, ಅಪರ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್, ಮುಖಂಡರಾದ ನಾಗರಾಜು, ಸಿದ್ದಪ್ಪ, ಕೀರ್ತಿಕುಮಾರ್, ಜಗದೀಶ್, ಸಿದ್ದರಾಜು, ಗ್ರಾಪಂ ಮಾಜಿ ಸದಸ್ಯ ಶಂಕರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net