

ಶ್ರೀರಂಗಪಟ್ಟಣ: ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಮಂಗಳವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಸ್ಪತ್ರೆಯಲ್ಲಿನ ಪುರುಷ ಮತ್ತು ಮಹಿಳಾ ರೋಗಿಗಳ ಕೊಠಡಿಗಳು, ಐಸಿಯು ವಾರ್ಡ್, ಡಯಾಲಿಸಿಸ್ ಘಟಕಗಳಲ್ಲಿ ಇರುವ ಸೌಲಭ್ಯ, ಸ್ವಚ್ಛತೆ ಮತ್ತು ಔಷಧ ವಿತರಣಾ ಕೇಂದ್ರವನ್ನು ವೀಕ್ಷಿಸಿದ ಶಾಸಕರು, ಕಾರ್ಯನಿರತ ವೈದ್ಯರು ಮತ್ತು ಹಾಜರಿದ್ದ ವೈದ್ಯಕೀಯ ಸಿಬ್ಬಂದಿಯೊಂದಿಗೆ ಚರ್ಚಿಸಿದ ಅವರು ಅಗತ್ಯವಾಗಿ ಬೇಕಿರುವ ಸೌಲಭ್ಯ, ಸಲಕರಣೆ ಕುರಿತು ಮಾಹಿತಿ ಪಡೆದರು. ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ಗುಣಪಡಿಸುವಂತೆ ಸೂಚಿಸಿದರು. ಪ್ರಮುಖವಾಗಿ ಒಳರೋಗಿಗಳು ಹಾಗೂ ಹೊರರೋಗಿಗಳ ಉಪಯೋಗಕ್ಕೆ ಅಗತ್ಯ ಶೌಚಗೃಹ ವ್ಯವಸ್ಥೆ ಕಲ್ಪಿಸಲು ತಿಳಿಸಿದರು. ವೈದ್ಯರಾದ ಡಾ.ಶಿವರಾಮ್ ಶಾಸ್ತ್ರೀ, ಸರ್ಜನ್ ಡಾ.ಮಹೇಶ್ ಸೇರಿದಂತೆ ಹಲವರು ಹಾಜರಿದ್ದರು.