ಮಳೆಹಾನಿ ಪೀಡಿತ ಪ್ರದೇಶಗಳಿಗೆ ಶಾಸಕ ಭೇಟಿ, ಪರಿಶೀಲನೆ

ವ್ಯಾಪಕ  ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಕ್ಕೆ ಶಾಸಕ ಎಚ್.ಟಿ.ಮಂಜು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವ್ಯಾಪಕ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಕ್ಕೆ ಶಾಸಕ ಎಚ್.ಟಿ.ಮಂಜು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Published on

ಕೆ.ಆರ್.ಪೇಟೆ: ಕೆಲ ದಿನಗಳಿಂದ ತಾಲೂಕಿನಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ಹಲವು ಪ್ರದೇಶಗಳು ಹಾನಿಗೊಳಗಾಗಿದ್ದು, ಮಂಗಳವಾರ ಶಾಸಕ ಎಚ್.ಟಿ.ಮಂಜು ಹಾನಿಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲೂಕಿನ ಕೈಗೋನಹಳ್ಳಿ, ಸಾರಂಗಿ, ಶ್ಯಾರಹಳ್ಳಿ, ಹಲಸಿನಹಳ್ಳಿ, ಹಳೆ ಅತ್ತಿಗುಪ್ಪೆ, ಹೊಸಹಳ್ಳಿ, ಸಂತೇಬಾಚಹಳ್ಳಿ, ಹುಬ್ಬನಹಳ್ಳಿ, ಲೋಕನಹಳ್ಳಿ, ಅಘಲಯ, ದೊಡ್ಡಸೋಮನಹಳ್ಳಿ, ಮಾಳಗೂರು, ಮಾದಿಹಳ್ಳಿ, ಅಂಕನಹಳ್ಳಿ, ದೇವರಹಳ್ಳಿ, ಚೌಡೇನಹಳ್ಳಿ ಮುಂತಾದ ಪ್ರದೇಶಗಳಿಗೆ ಶಾಸಕರು ತಾಲೂಕು ಆಡಳಿತದ ಜತೆಗೂಡಿ ಭೇಟಿ ನೀಡಿ ನೆರೆ ಪೀಡಿತ ಸ್ಥಳಗಳನ್ನು ಖುದ್ದು ವೀಕ್ಷಣೆ ಮಾಡಿದರು. ಬೆಳೆ, ಸೇತುವೆ, ರಸ್ತೆ ಹಾನಿ, ಭೂಕುಸಿತದಿಂದ ಉಂಟಾಗಿರುವ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಇದೇ ವೇಳೆ ಸಾರ್ವಜನಿಕರು ಹಾಗೂ ರೈತರ ಅಹವಾಲು ಆಲಿಸಿದರು.

ನೆರೆ ಹಾವಳಿಯಿಂದ ಹಾನಿಗೀಡಾಗಿರುವ ಸೇತುವೆ ಮತ್ತು ರಸ್ತೆಗಳನ್ನು ತಕ್ಷಣವೇ ದುರಸ್ತಿಗೆ ಅಗತ್ಯ ಕ್ರಮ ವಹಿಸುವ ಮೂಲಕ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಹಳ್ಳದ ನೀರಿನಿಂದ ಹಲವಾರು ಕಡೆ ಬೆಳೆ ಹಾನಿಯಾಗಿದೆ. ತಕ್ಷಣವೇ ಬೆಳೆ ಹಾನಿ ಪ್ರದೇಶದ ರೈತರಿಗೆ ಸೂಕ್ತ ಪರಿಹಾರ ನೀಡಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಶಾಸಕರು ಸೂಚಿಸಿದರು.

ಮಳೆಹಾನಿಯಾಗಿರುವ ಹೊಸಹಳ್ಳಿ, ಸಂತೇಬಾಚಹಳ್ಳಿ ಕೆರೆ ಅಚ್ಚುಕಟ್ಟು ಪ್ರದೇಶಗಳಿಗೆ ತಹಸೀಲ್ದಾರ್ ಅವರೊಂದಿಗೆ ಶಾಸಕರು ಬೈಕ್ ನಲ್ಲಿ ಹೋಗಿ ವೀಕ್ಷಣೆ ಮಾಡಿದರು. ನೀರಿನ ಪ್ರವಾಹದಿಂದ ಕೊಚ್ಚಿ ಹೋಗಿರುವ ಬೆಳೆಗಳು, ಜಮೀನುಗಳು, ಸಂಪರ್ಕ ಸೇತುವೆಗಳು, ಕೆರೆಕೋಡಿಗಳನ್ನೂ ವೀಕ್ಷಿಸಿ ಮಾಹಿತಿ ಪಡೆದರು.

ಸರ್ಕಾರದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ: ನಾನು ಬಹಳ ಸಂಕಷ್ಟದ ಪರಿಸ್ಥಿತಿಯಲ್ಲಿ ಶಾಸಕನಾಗಿದ್ದೇನೆ. ರಾಜ್ಯ ಸರ್ಕಾರ ವಿರೋಧ ಹಾಗೂ ಆಡಳಿತ ಪಕ್ಷದ ಶಾಸಕರಿಗೆ ಅನುದಾನ ನೀಡದಿರುವಷ್ಟು ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಆರೋಪಿಸಿದರು.

ಬಾಗಿನ ಅರ್ಪಣೆ: ಹಳೆಅತ್ತಿಗುಪ್ಪೆ ಕೆರೆಗೆ ಶಾಸಕ ಮಂಜು ಸ್ಥಳೀಯರೊಂದಿಗೆ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು. ಅಂತೆಯೇ ತಾಲೂಕಿನಲ್ಲಿ ಉತ್ತಮ ಮಳೆ ಬೆಳೆಯಾಗಿ ರೈತರು ಸಮೃದ್ದಿಯಿಂದ ಜೀವನ ನಡೆಸುವಂತಾಗಲಿ ಎಂದು ಪ್ರಾರ್ಥಿಸಿದರು.

ಹಳೆ ಅತ್ತಿಗುಪ್ಪೆ ಕೆರೆಗೆ ಏತನೀರಾವರಿ ಮೂಲಕ ದಮ್ಮನಿಂಗಲ ಭಾಗದಿಂದ ನೀರು ತುಂಬಿಸಿಕೊಡುತ್ತಿರುವ ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ ಅವರಿಗೆ ತಾಲೂಕಿನ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ತಾಪಂ ಇಒ ಕೆ.ಸುಷ್ಮಾ, ಹೇಮಾವತಿ ಜಲಾಶಯದ ಕಾರ್ಯಪಾಲಕ ಇಂಜಿನಿಯರ್ ಆನಂದ್, ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನಿರ್ಮಲೇಶ್, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಲೋಕೇಶ್, ಸಹಾಯಕ ಕೃಷಿ ನಿರ್ದೇಶಕ ಸಂತೋಷ್ ಕುಮಾರ್, ಪಟ್ಟಣ ಪೊಲೀಸ್ ಠಾಣೆ ಎಸ್‌ಐ ಕೆ. ನವೀನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net