ಮೂಲ ಸೌಕರ್ಯಕ್ಕೆ ಆದ್ಯತೆ ನೀಡಿ, ಶಾಸಕ ಮಹೇಶ ಟೆಂಗಿನಕಾಯಿ ಸೂಚನೆ

Published on

ಹುಬ್ಬಳ್ಳಿ: ನಗರದ ವಾರ್ಡ್ ನಂಬರ್ 59, 43, 44, 39 ಹಾಗೂ 49ರ ವ್ಯಾಪ್ತಿಯ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿದ ಶಾಸಕ ಮಹೇಶ ಟೆಂಗಿನಕಾಯಿ ಅವರು ಅಲ್ಲಿನ ಸಮಸ್ಯೆಗಳನ್ನು ಆಲಿಸಿದರು.

ಲೋಕೋಪಯೋಗಿ ಇಲಾಖೆ, ಎಲ್ ಆಂಡ್ ಟಿ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿದ ಶಾಸಕರು, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು. ಜನರಿಂದ ಮನವಿ ಸ್ವೀಕರಿಸಿ, ಪರಿಹಾರದ ಭರವಸೆ ನೀಡಿದರು.

ಇಲ್ಲಿಯ ನವೀನ ಪಾರ್ಕ್, ವಸಂತ ನಗರ, ಮುದಗಲ್ ಲೇಔಟ್, ಕುಬೇರಪುರಂ, ಮಧುರಾ ಚೇತನ ಕಾಲನಿ, ಬದಾಮಿ ನಗರ, ಆಂಜನೇಯ ಬಡಾವಣೆ, ರಾಘವೇಂದ್ರ ಕಾಲನಿ, ಫಾರೆಸ್ಟ್ ಕಾಲನಿ ಹಾಗೂ ಲಕ್ಷಿ$್ಮ ನಾರಾಯಣ ಮುಖ್ಯ ರಸ್ತೆಯಿಂದ ಟೆಂಡರ್ ಶ್ಯೂರ್ ರಸ್ತೆ ವರೆಗಿನ ರಸ್ತೆಗಳನ್ನು ಪರಿಶೀಲನೆ ನಡೆಸಿದರು.

ಪ್ರಮುಖವಾಗಿ ಒಳಚರಂಡಿ, ವಿದ್ಯುತ್ ಹಾಗೂ ರಸ್ತೆಯ ಸಮಸ್ಯೆಗಳ ಕುರಿತು ಸಾರ್ವಜನಿಕರು ಶಾಸಕರ ಎದುರು ಅಳಲು ತೋಡಿಕೊಂಡರು. ಸಂಬಂಧಿಸಿದ ಅಧಿಕಾರಿಗಳಿಗೆ ಶೀಘ್ರ ಪರಿಹಾರ ನೀಡುವಂತೆ ಶಾಸಕರು ಸೂಚಿಸಿದರು.

ಪಾಲಿಕೆ ಸದಸ್ಯರಾದ ಉಮಾ ಮುಕುಂದ, ಭೀರಪ್ಪ ಖಂಡೇಕರ, ಸೀಮಾ ಸಿದ್ದು ಮೊಗಲಿಶೆಟ್ಟರ್, ಸಮಾಜ ಸೇವಕ ಡಾ. ವಿಎಸ್ವಿ ಪ್ರಸಾದ್ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net