

ಹರಿಹರ: ಸರ್ಕಾರಿ ಪ್ರೌಢಶಾಲೆಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಬಿ.ಪಿ. ಹರೀಶ್ ಭರವಸೆ ನೀಡಿದರು.
ಗುತ್ತೂರಿನ ಸರ್ಕಾರಿ ಪ್ರೌಢಶಾಲೆಗೆ ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯಿಂದ ನೀಡಿದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ತಾಲೂಕಿನ ಉತ್ತಮ ಸರ್ಕಾರಿ ಪ್ರೌಢಶಾಲೆಗಳಲ್ಲಿ ಗುತ್ತೂರಿನ ಶಾಲೆಯು ಒಂದಾಗಿದೆ ಎಂದು ಶ್ಲಾಘಿಸಿದರು.
ಹೆಚ್ಚಿನ ವಿದ್ಯಾರ್ಥಿಗಳ ಸಂಖ್ಯೆ, ಪ್ರತಿಭಾವಂತ ಶಿಕ್ಷಕರು, ಉತ್ತಮ ಫಲಿತಾಂಶ ಪಡೆಯುತ್ತಿರುವುದು ಈ ಶಾಲೆಯ ಹೆಚ್ಚುಗಾರಿಕೆಯಾಗಿದೆ. ಶಾಲೆಗೆ ಅಗತ್ಯ ಇರುವ ಸೌಲಭ್ಯಗಳನ್ನು ಒದಗಿಸಿದಲ್ಲಿ ಇನ್ನಷ್ಟು ಉತ್ತಮ ಶೈಕ್ಷಣಿಕ ವಾತಾವರಣ ವಿದ್ಯಾರ್ಥಿಗಳಿಗೆ ಸಿಗಲಿದೆ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಜೆ. ನಾಗರಾಜ್ ಮಾತನಾಡಿ, 250 ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಶ್ರಮದಿಂದ ಉತ್ತಮ ಶೈಕ್ಷಣಿಕ ವಾತಾವರಣವಿದೆ. ಇಲ್ಲಿ ವಿದ್ಯಾಭ್ಯಾಸ ಮಾಡಿದ ಹಳೆ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡುತ್ತಿದ್ದಾರೆಂದು ಹೇಳಿದರು.
ಮಳೆಯಿಂದ ಸೋರಿಕೆಯಾಗುತ್ತಿರುವ ಕೊಠಡಿಗಳ ದುರಸ್ತಿ, ಕಾಂಪೌಂಡ್ ನಿರ್ಮಾಣ, ಕುಡಿಯುವ ನೀರಿನ ಘಟಕ ಸ್ಥಾಪನೆ, ಬಿಸಿ ಊಟ ಸೇವನೆಗೆ ಶಾಲೆ ಕಟ್ಟಡದ ಮೇಲೆ ದಾಸೋಹದ ಹಾಲ್ ಹಾಗೂ 6 ಕೊಠಡಿಗಳ ನಿರ್ಮಾಣ, ಗುಮಾಸ್ತ ಹಾಗೂ ಜವಾನ ಹುದ್ದೆಗಳ ಸೃಷ್ಟಿ ಮತ್ತು ನೇಮಕಾತಿ ಮಾಡಬೇಕಿದೆ ಎಂದರು.
ಮುಖ್ಯ ಶಿಕ್ಷಕ ಟಿ. ಸಿದ್ದಪ್ಪ, ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಕರಿಬಸಪ್ಪ, ಸಾಮಾಜಿಕ ಕಾರ್ಯಕರ್ತ ಐರಣಿ ಹನುಮಂತಪ್ಪ, ಬಿಜೆಪಿ ಮುಖಂಡ ಎ.ಪಿ. ಆನಂದ್, ಶಿಕ್ಷಕರಾದ ಎಂ.ಎನ್. ಶ್ರೀಧರಮಯ್ಯ, ವಿ.ಎಸ್. ನಾಗರಾಜ್, ಪಿ. ನಾಗರಾಜ್ ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರಿದ್ದರು.