

ಚಿಟಗುಪ್ಪ: ಮನ್ನಾಎಖೇಳ್ಳಿ ಗ್ರಾಮದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ನಿಲ್ದಾಣಕ್ಕೆ ಸೋಮವಾರ ದಿಢೀರ್ ಭೇಟಿ ನೀಡಿದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಅವ್ಯವಸ್ಥೆ ಮತ್ತು ಅಸ್ವಚ್ಛತೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಾರ್ವಜನಿಕರ ದೂರಿನನ್ವಯ ಭೇಟಿ ನೀಡಿದ ಅವರು, ಶುಚಿತ್ವವಿಲ್ಲದೆ ಬಸ್ ನಿಲ್ದಾಣದಲ್ಲಿ ದುರ್ನಾತ ಬೀರುತ್ತಿದೆ. ಶೌಚಗೃಹ ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ. ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲ. ಕೂಡಲೇ ಎಲ್ಲೆಡೆ ಸ್ವಚ್ಛತೆ ಮಾಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಖಾಸಗಿ ಏಜೆನ್ಸಿಯವರಿಗೆ ಶುಚಿತ್ವ ಜತೆಗೆ ಸೂಕ್ತ ನಿರ್ವಹಣೆ ಮಾಡಲು ಆಗದಿದ್ದರೆ ಬೇರೆಯವರನ್ನು ನೋಡಿಕೊಳ್ಳಿ ಎಂದು ಡಿಪೋ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿದ ಅವರು, ಮನ್ನಾಎಖೇಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಅಂತಾರಾಜ್ಯ ಸಾರಿಗೆ ಸಂಪರ್ಕ ಕೇಂದ್ರ. ನಿಲ್ದಾಣದಲ್ಲಿನ ಅಂಗಡಿ, ಹೋಟೆಲ್‌ನವರು ಪ್ಲಾಸ್ಟಿಕ್ ಎಸೆಯದಂತೆ ನೋಡಿಕೊಳ್ಳಬೇಕು. ಸಂಸ್ಥೆ ಅಧಿಕಾರಿಗಳು ಗ್ರಾಪಂ ಸಹಯೋಗದೊಂದಿಗೆ ಶುಚಿತ್ವ ಕಾಪಾಡಬೇಕು ಎಂದರು.
ಬಸ್ ನಿಲ್ದಾಣಕ್ಕೆ ನಿತ್ಯ ಸಾವಿರಾರು ಜನ ಭೇಟಿ ನೀಡುತ್ತಿದ್ದು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ನಿಲ್ದಾಣ ಎದುರಿನ ರಸ್ತೆ ದುರಸ್ತಿ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.
ಡಿಟಿಓ ಇಂದ್ರಸೇನ ಬಿರಾದಾರ, ಡಿಪೋ ವ್ಯವಸ್ಥಾಪಕ ರಾಜಶೇಖರ ಇತರರಿದ್ದರು.