

ಬೆಳಗಾವಿ: ದೇಸಿ ತಳಿಯ ಹಸುಗಳನ್ನು ಉಳಿಸಲು ಸರ್ಕಾರ ಯೋಜನೆಗಳನ್ನು ರೂಪಿಸಬೇಕು. ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಮಾತನಾಡುವ ಬಿಜೆಪಿಯ ನಾಯಕರು ತಮ್ಮ ಮನೆಯಲ್ಲಿ ಹಸು ಸಾಕಿಲ್ಲ. ಈ ಬಗ್ಗೆ ಸುಮ್ಮನೆ ಮಾತನಾಡುತ್ತಾರೆ. ಪ್ಲಾಸ್ಟಿಕ್ ಆಕಳನ್ನು ಕಟ್ಟಿ ಪೂಜಿಸುವ ಅವರು, ಮನೆಗಳಲ್ಲಿ ಆಕಳುಗಳನ್ನು ಕಟ್ಟಿ ಮಾತನಾಡಲಿ ಎಂದು ಶಾಸಕ ವಿನಯ್ ಕುಲಕರ್ಣಿ ಬಿಜೆಪಿಗೆ ಟಾಂಗ್ ನೀಡಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಆಕಳುಗಳನ್ನು ಸಾಕಿದ್ದೇನೆ. ಆದರೆ, ಈಗ ಕೃಷಿ ಚಟುವಟಿಕೆಯಲ್ಲಿ ಹೆಚ್ಚಿನವರು ಆಕಳು ಬಳಸುತ್ತಿಲ್ಲ. ಅವುಗಳಿಗೆ ಸರಿಯಾಗಿ ಮೇವು ಸಿಗದ ಕಾರಣ ಸಾಕುವುದೇ ಕಷ್ಟವಾಗಿದೆ. ಹೀಗಿರುವಾಗ ವಯಸ್ಸಾದ ಆಕಳುಗಳನ್ನು ಏನು ಮಾಡೋದು? ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಯಾಗಬೇಕು. ಗೋಮಾತೆ ಹೆಸರಿನಲ್ಲಿ ರಾಜಕೀಯ ಮಾಡುವವರು ಹಾಲಿನ ಡೇರಿಗಳ ಮಾಲೀಕರು ಮತ್ತು ರೈತರ ವಿಚಾರಗಳನ್ನು ತಿಳಿದುಕೊಳ್ಳಬೇಕು. ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಟೀಕಿಸುವ ನೈತಿಕತೆ ಇಲ್ಲ ಎಂದರು.
ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದೊಡ್ಡ ಮಟ್ಟದಲ್ಲಿ ಬಹುಮತ ಸಿಕ್ಕಿದೆ. ಆದರೆ, ನಮ್ಮ ಸಮುದಾಯಕ್ಕೆ ಹಿಂದೆ ಮಾಡಿದ ಅನ್ಯಾಯ ಪುನರಾವರ್ತನೆಯಾಗಬಾರದು. ಲಿಂಗಾಯತ ಸಮುದಾಯದವರು ಮತ ಚಲಾಯಿಸಿದ ಕಾರಣ ಈ ಬಾರಿ ಕಾಂಗ್ರೆಸ್ 135 ಸ್ಥಾನ ಗೆಲ್ಲಲು ಸಾಧ್ಯವಾಯಿತು. ನಮ್ಮ ಸಮುದಾಯಕ್ಕೆ ಒತ್ತು ನೀಡದೇ ಇದ್ದಿದ್ದರಿಂದ ಕಾಂಗ್ರೆಸ್ ಪರಿಸ್ಥಿತಿ ಇಷ್ಟುವರ್ಷ ಏನಾಗಿತ್ತು ಎಂಬುದನ್ನು ಮುಖಂಡರು ಗಮನಿಸಬೇಕು ಎಂದರು. ಪಂಚಮಸಾಲಿ ಮೀಸಲಾತಿ ಹೋರಾಟದ ನೇತೃತ್ವ ವಹಿಸಿದವರಿಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿ ಪಂಚಮಸಾಲಿ ಸಮುದಾಯದ 13 ಜನರು ಆಯ್ಕೆಯಾಗಿದ್ದೇವೆ. ಪಕ್ಷ ಗುರುತಿಸಬೇಕಿತ್ತು. ಸಮುದಾಯ ಬಹಳ ಈ ಬಗ್ಗೆ ಬಹಳ ಸೂಕ್ಷ್ಮತೆಯಿಂದ ಗಮನಿಸುತ್ತದೆ. ಈ ವಿಚಾರ ಲೋಕಸಭೆ ಚುನಾವಣೆ ಮೇಲೆ ಪ್ರಭಾವ ಬೀರಲಿದೆ. ಖಾತೆ ಹಂಚಿಕೆಯಲ್ಲೂ ಲಿಂಗಾಯತರಿಗೆ ಅನ್ಯಾಯವಾಗಿದೆ ಎಂದರು.
ನಮ್ಮ ಸಮುದಾಯವಷ್ಟೇ ಅಲ್ಲ. ಬೇರೆ ಸಮುದಾಯಗಳಿಗೂ ಅವಕಾಶ ಸಿಗಬೇಕು. ಹಿಂದೆ ಸಚಿವರಾಗಿದ್ದವರಿಗೆ ಮತ್ತೆ ಅವಕಾಶ ಕೊಡುವುದು ಏಕೆ? ಭವಿಷ್ಯದಲ್ಲಿ ಹೊಸ ನಾಯಕರನ್ನು ಸೃಷ್ಟಿಸಬೇಕಿದೆ. ಮುಂಬರುವ ದಿನಗಳಲ್ಲಿ ನನಗೆ ಅವಕಾಶ ಸಿಕ್ಕೇ ಸಿಗುತ್ತದೆ ಎಂದರು.