ಎರಡು ದಿನದಲ್ಲಿ ಎಲ್ಲ ಗುಂಡಿಗಳನ್ನು ಮುಚ್ಚಲಾಗುವುದು; ಶಾಸಕ ವೇದವ್ಯಾಸ ಕಾಮತ್‌

MNG-August Meeting
Published on

ಮಂಗಳೂರು: ಇತ್ತೀಚೆಗೆ ಸಂಭವಿಸಿದ ರಸ್ತೆ ಅಪಘಾತಗಳನ್ನು ಮನಗಂಡು ಅದರಲ್ಲೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಗೂ ಪಾಲಿಕೆ ವ್ಯಾಪ್ತಿಯ ರಸ್ತೆಗಳ ಗುಂಡಿಯನ್ನು ಸರಿಪಡಿಸಲು ಸೂಚನೆ ನೀಡಲಾಗಿದ್ದು ವಿವಿಧ ಕಡೆಗಳಲ್ಲಿ ರಸ್ತೆ ಗುಂಡಿ ಸರಿಪಡಿಸಲಾಗಿದೆ. ಬಾಕಿಯುಳಿದಿರುವ ಗುಂಡಿಗಳನ್ನು 2 ದಿನಗಳಲ್ಲಿ ಸರಿಪಡಿಸಲಾಗುವುದು ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ಪಾಲಿಕೆ ಆಯುಕ್ತ ಅಕ್ಷಿ ಶ್ರೀಧರ್, ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆ ಮುಖ್ಯಸಚೇತಕ ಸುಧೀರ್ ಶೆಟ್ಟಿ ಹಾಗೂ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿದ ಬಳಿಕ ಮಾತನಾಡಿದರು.
ಮಂಗಳೂರು ನಗರ ದಕ್ಷಿಣ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದು, ರಸ್ತೆ ಗುಂಡಿಗಳನ್ನು ಮುಚ್ಚಲು ಪಾಲಿಕೆ ವತಿಯಿಂದ ಕ್ರಮ ಕೈಗೊಳ್ಳಲಾಗುವುದು. ಪಾಲಿಕೆಯಿಂದ ನೀಡಲಾಗಿರುವ ವಾಟ್ಸಾೃಪ್ ಸಂಖ್ಯೆಗೆ ಹಲವರು ಚಿತ್ರಗಳನ್ನು ಕಳಿಸಿದ್ದಾರೆ. ಆ ಎಲ್ಲ ಗುಂಡಿಗಳನ್ನು ಮುಚ್ಚುವ ಕೆಲಸ ಶುಕ್ರವಾರದಿಂದ ಪ್ರಾರಂಭವಾಗಲಿದೆ. ನಗರದಲ್ಲಿ 2 ತಿಂಗಳಲ್ಲಿ ಸುರಿಯಬೇಕಾದ ಮಳೆ ಒಂದೇ ತಿಂಗಳಿನಲ್ಲಿ ಸುರಿದ ಪರಿಣಾಮ ರಸ್ತೆ ಗುಂಡಿಗಳು ನಿರ್ಮಾಣವಾಗಿದೆ. ವರ್ಷದ 7ತಿಂಗಳ ಮಳೆಯ ಸಂದರ್ಭದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವುದು ಸೇರಿದಂತೆ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಳೆಯ ಸಂದರ್ಭದಲ್ಲಿ ಡಾಮರು ಅಳವಡಿಸಿದರೂ ಎದ್ದು ಹೋಗುತ್ತಿರುವ ಕಾರಣ ಕಾಮಗಾರಿ ಸ್ಥಗಿತಗೊಂಡಿತ್ತು ಎಂದರು.
ನಗರದ ವಿವಿಧೆಡೆ ಸ್ಮಾರ್ಟ್ ಸಿಟಿ, ಕೆಯುಡಿಎಫ್‌ಸಿ, ಜಲಸಿರಿ, ಗೈಲ್ಗ್ಯಾಸ್ ಕಾಮಗಾರಿಗಳು ನಡೆಯುತ್ತಿವೆ. ಕೋವಿಡ್ ಕಾರಣದಿಂದ ಸಾವಿರಾರು ವಲಸೆ ಕಾರ್ಮಿಕರು ಊರಿಗೆ ತೆರಳಿದ್ದು ನಿರೀಕ್ಷಿತ ಮಟ್ಟದಲ್ಲಿ ಕಾರ್ಮಿಕರು ವಾಪಸಾಗದೆ ಇರುವ ಕಾರಣ 2 ವರ್ಷಗಳಿಂದ ಕಾಮಗಾರಿ ವಿಳಂಬವಾಗಿದೆ. ಅತೀ ಶೀಘ್ರದಲ್ಲಿ ಕಾಮಗಾರಿ ಅನುಷ್ಠಾನ ಮಾಡದಿದ್ದರೆ ಅನುದಾನದ ವಾಯಿದೆ ಮುಕ್ತಾಯವಾಗುವ ಕಾರಣ ಕೆಲಸಗಳಿಗೆ ವೇಗ ನೀಡಲಾಗಿದೆ. ವಿಪರೀತ ಮಳೆಯ ಕಾರಣ ಸಮಸ್ಯೆಯಾಗುತ್ತಿದೆ ಎಂದರು. #PatholeSeAzadi ಅಭಿಯಾನದ ಭಾಗವಾಗಿ ರಾಷ್ಟ್ರೀಯ ಹೆದ್ದಾರಿ ಹಾಗೂ ಪಾಲಿಕೆ ವ್ಯಾಪ್ತಿಯ ರಸ್ತೆ ಗುಂಡಿ ಮುಚ್ಚುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಮಳೆಗಾಲದ ಸಂದರ್ಭದಲ್ಲಿ ಡಾಮರು ಕಂಪನಿಗಳೂ ಸ್ಥಗಿತಗೊಳ್ಳುವ ಕಾರಣ ಸಾರ್ವಜನಿಕರಿಗೆ ಸಮಸ್ಯೆಗಳಾಗಿರುವ ಕುರಿತು ವಿಷಾದಿಸುತ್ತೇವೆ ವೇದವ್ಯಾಸ ಕಾಮತ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net