ವಿದ್ಯಾರ್ಥಿಗಳಿಗೆ ಸಂವಿಧಾನದ ಮಹತ್ವ ತಿಳಿಸುವುದು ಅಗತ್ಯ : ಶಾಸಕ ವೇದವ್ಯಾಸ ಕಾಮತ್ ಆಶಯ

mng-26nov-mla kamath
Published on

ಮಂಗಳೂರು : ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿರುವ ಭಾರತ ಸಂವಿಧಾನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ನಿರಂತರ ಪ್ರಯತ್ನಗಳಾಗಬೇಕು ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದರು.
ದ.ಕ.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಂಗಳೂರು ಮಹಾನಗರ ಪಾಲಿಕೆ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ
ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಭಾರತ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು ಸಂವಿಧಾನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಗೌರವ ನೀಡಲಾಗಿದೆ. ಸಂವಿಧಾನ ಕರ್ತರು ಭಾರತದ ನೆಲ,ಸಂಸ್ಕೃತಿ ಮತ್ತು ಸಾಮಾಜಿಕ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಇಲ್ಲಿಗೆ ಪೂರಕವಾದ ಕಾನೂನುಗಳನ್ನು ಜಾರಿಗೆ ತರಲು ಶ್ರಮಿಸಿದ್ದಾರೆ.
ಡಾ. ಬಿ.ಆರ್ ಅಂಬೇಡ್ಕರ್ ಅವರ ಹುಟ್ಟಿದ ಸ್ಥಳ, ಅವರು ಓಡಾಡಿದ ಪರಿಸರ, ಕಲಿತ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಅವರಿಗೆ
ಸಂಬಂಧಪಟ್ಟ ಸ್ಥಳಗಳ ಅಭಿವೃದ್ಧಿಗೆ ಮತ್ತು ಇತಿಹಾಸವನ್ನು ರಕ್ಷಿಸಲು ಸರ್ಕಾರ ಯೋಜನೆ ರೂಪಿಸಿರುವುದು ಶ್ಲಾಘನೀಯ ಎಂದು ಶಾಸಕ ಕಾಮತ್ ಹೇಳಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್.ಎಂ.ಪಿ ಸಂವಿಧಾನ ಪೀಠಿಕೆ ಬೋಧಿಸಿದರು. ಗೋಕರ್ಣನಾಥೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಘುರಾಜ್ ಕದ್ರಿ, ನಾರಾಯಣಗುರು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ, ವಿಶ್ವವಿದ್ಯಾನಿಲಯ ಕಾಲೇಜಿನ ಉಪನ್ಯಾಸಕ ರಘು ಧರ್ಮಸೇನ ಅವರಿಂದ ಸಂವಿಧಾನ ಮಹತ್ವ ಹಾಗೂ ಸಾಗಿಬಂದ ಹಾದಿ ಕುರಿತು ಉಪನ್ಯಾಸ
ನಡೆಯಿತು.
ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್.ಕೆ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸಿ.ಎಲ್ ಆನಂದ್ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಹೇಮಲತಾ ಸ್ವಾಗತಿಸಿ, ಸಹಾಯಕ ನಿರ್ದೇಶಕ ಸುರೇಶ್ ಅಡಿಗ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net