ಕರಾವಳಿಯ ಟೆಂಪಲ್ ಟೂರಿಸಂಗೆ ಆದ್ಯತೆ ನೀಡಿ -ವಿಧಾನಸಭೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಮನವಿ

allwyn_130820_kamath
Published on


ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವುದರ ಜತೆಗೆ ಟೆಂಪಲ್ ಟೂರಿಸಂ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಅವರು ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರವನ್ನು ವಿನಂತಿಸಿದರು.
ಕರಾವಳಿಯಲ್ಲಿ ಪ್ರಸಿದ್ಧ ತೀರ್ಥಕ್ಷೇತ್ರಗಳಿವೆ. ಇಲ್ಲಿನ ದೈವ ದೇವರುಗಳಿಗೆ ದೇಶ, ವಿದೇಶಗಳಲ್ಲೂ ಭಕ್ತರಿದ್ದಾರೆ. ಪ್ರತೀ ವರ್ಷ ಸಾವಿರಾರು ಭಕ್ತರು ರಸ್ತೆ, ಜಲ, ವಾಯು ಸಾರಿಗೆಗಳನ್ನು ಬಳಸಿಕೊಂಡು ಇಲ್ಲಿನ ಪುಣ್ಯಕ್ಷೆತ್ರಗಳಿಗೆ ಭೇಟಿ ನೀಡುತ್ತಿರುತ್ತಾರೆ. ಇಲ್ಲಿಗೆ ಭೇಟಿ ನೀಡುವವರಿಗೆ ಇನ್ನೂ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಒದಗಿಸಿದರೆ ಕರಾವಳಿ ಧಾರ್ಮಿಕ ಟೂರಿಸಂಗೆ ಹೇರಳ ಅವಕಾಶವಿದೆ ಎಂದು ಶಾಸಕರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ‘ ಟೆಂಪಲ್ ಟೂರಿಸಂಗೆ ಇಡೀ ರಾಜ್ಯದಲ್ಲಿ ದಕ್ಷಿಣ ಕನ್ನಡ ಉಡುಪಿ ಹಾಗೂ ಉತ್ತರ ಕನ್ನಡ ಈ ಮೂರೂ ಜಿಲ್ಲೆಗಳು ನೀಡಿರುವ ಕೊಡುಗೆ ಬಹಳಷ್ಟಿದೆ. ಇದನ್ನು ಗಮನದಲ್ಲಿರಿಸಿ ನೂತನ ಪ್ರವಾಸೋದ್ಯಮ ನೀತಿಯಲ್ಲಿ ಶಾಸಕ ಕಾಮತ್ ಅವರು ಉಲ್ಲೇಖಿಸಿದ ಕರಾವಳಿಯ ಟೆಂಪಲ್ ಟೂರಿಸಂಗೂ ವಿಶೇಷ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
* ಆಟೋ ಚಾಲಕರ ಸಮಸ್ಯೆ ಬಗೆಹರಿಸಲು ಒತ್ತಾಯ
ಮಂಗಳೂರು ನಗರದ ಆಟೋ ರಿಕ್ಷಾ ಚಾಲಕರು ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದ ಶಾಸಕ ವೇದವ್ಯಾಸ ಕಾಮತ್ ಅವರು ಆಟೋ ಚಾಲಕರ ಈ ನ್ಯಾಯಯುತ ಬೇಡಿಕೆಗೆ ಸ್ಪಂದಿಸುವಂತೆ ಮನವಿ ಮಾಡಿದರು.
ಮಂಗಳೂರು ನಗರದಲ್ಲಿ ದುಡಿಯುತ್ತಿರುವ ಸಾವಿರಾರು ರಿಕ್ಷಾ ಚಾಲಕರು ಮೀಟರ್ ಮುದ್ರೆಗಾಗಿ ನಗರ ಹೊರ ವಲಯದ ದೂರದ ಕುಲಶೇಖರಕ್ಕೆ ಹೋಗಬೇಕಾಗಿದೆ. ಅಲ್ಲಿ ಸರತಿ ಸಾಲಲ್ಲಿ ನಿಲ್ಲಬೇಕಾಗಿದ್ದು ಎಲ್ಲರಿಗೂ ಮೀಟರ್ ಮುದ್ರೆ ಸಿಗದೇ ಹಲವರು ವಾಪಾಸ್ ಬರುವ ಪರಿಸ್ಥಿತಿಯಿದೆ. ಹೀಗಾಗಿ ನಗರದ ಕೇಂದ್ರ ಭಾಗದಲ್ಲಿರುವ ಮಂಗಳೂರಿನ ಆರ್‌ಟಿಒ ಕಚೇರಿಯಲ್ಲೇ ವಾರಕ್ಕೆ ಎರಡು ಬಾರಿ ಮೀಟರ್ ಮುದ್ರೆ ನೀಡುವ ವ್ಯವಸ್ಥೆ ಕಲ್ಪಿಸಿಕೊಡುವಂತೆ ಶಾಸಕರು ಸರ್ಕಾರವನ್ನು ಆಗ್ರಹಿಸಿದರು.
........................

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net