ಮೈಸೂರು: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಜೈಲಿನಲ್ಲಿ ಆಡಳಿತ ನಡೆಸುತ್ತಾರೆ ಎಂದು ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಹೇಳಿಕೆ ನೀಡಿರುವುದು ಬಾಲಿಶವಾದದ್ದು ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಟೀಕಿಸಿದರು.
ಕ್ಷೇತ್ರದಲ್ಲಿ ಬಹಳಷ್ಟು ಕೆಲಸವಿದ್ದರೂ ಮಾಡದೆ ಶ್ರೀವತ್ಸ ಅವರು ಟೀಕೆ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಬಿಜೆಪಿಯಲ್ಲಿರುವ ಶಾಸಕರು, ಸಂಸದರ ಮೇಲೆ ತನಿಖೆ ಮಾಡಿದರೆ ನೂರಕ್ಕೆ 95ರಷ್ಟು ಭ್ರಷ್ಟರೇ ಸಿಗುತ್ತಾರೆ. ಶ್ರೀವತ್ಸ ಅವರು ತಮ್ಮ ಹೇಳಿಕೆ ವಾಪಸ್ ಪಡೆದು, ಬಹಿರಂಗ ಕ್ಷಮೆ ಕೋರಬೇಕು. ಕ್ಷೇತ್ರದಲ್ಲಿ ಕೆಲಸ ಮಾಡಿ ತೋರಿಸಲಿ ಎಂದು ಕುಟುಕಿದರು.
ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಮಾತನಾಡಿ, ಅಚಾನಕ್ಕಾಗಿ ಗೆದ್ದು ಶಾಸಕರಾಗಿರುವ ಟಿ.ಎಸ್.ಶ್ರೀವತ್ಸ ಅವರು ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ರಾಜಕಾರಣ ಮಾಡಿಕೊಂಡೇ ದಿನದೂಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಟೀಕಿಸಿರುವ ಅವರಿಗೆ ಇದೇ ಕೊನೆಯ ಚುನಾವಣೆಯಾಗಲಿದ್ದು, ಮುಂದಿನ ಚುನಾವಣೆಯಲ್ಲಿ ಹೀನಾಯವಾಗಿ ಸೋಲುತ್ತಾರೆ ಎಂದರು.
ಮುಡಾ ಹಗರಣ ಮುಂದಿಟ್ಟು ಸುಖಾಸುಮ್ಮನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಕೇವಲ ಹಿಂದುತ್ವ ಎಂದು ಪ್ರತಿಭಟನೆ ಮಾಡಿಕೊಂಡು ಸುಮ್ಮನಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮುಖಂಡರಾದ ನಾಗೇಶ್, ಡೇರಿ ವೆಂಕಟೇಶ್, ವೀಣಾ ಇದ್ದರು.