ಹೃದ್ರೋಗ ಪೂರ್ವ ಆರೋಗ್ಯ ತಪಾಸಣೆಗೆ ಶಾಸಕ ತಿಪ್ಪಾರೆಡ್ಡಿ ಸಲಹೆ

CTD HART
Published on

ಚಿತ್ರದುರ್ಗ: ಇಂಡಿಯಾನಾ ಎಸ್‌ಜೆಎಂ ಹಾರ್ಟ್ ಸೆಂಟರ್ ನಗರದ ಕೆಎಸ್‌ಆರ್‌ಟಿಸಿ ಹಳೆ ಡಿಪೋ ರಸ್ತೆಯಲ್ಲಿ ಸ್ಥಾಪಿಸಿರುವ ಇಂಡಿಯಾನಾ ಹಾರ್ಟ್ ಕ್ಲಿನಿಕ್‌ಗೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಭಾನುವಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು,ಮಧ್ಯ ಕರ್ನಾಟಕದ ಈ ಜಿಲ್ಲೆಯಲ್ಲಿ ಹೃದ್ರೋಗ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಇರಲಿಲ್ಲ.

ಚಿಕಿತ್ಸೆಗೆಂದು ಹಿಂದುಳಿದ ಜಿಲ್ಲೆಯ ಜನರು ಮಣಿಪಾಲ,ಬೆಂಗಳೂರು ಎಂದೆಲ್ಲ ಪರಸ್ಥಳಗಳಿಗೆ ಹೋಗಬೇಕಿತ್ತು. ಮಂಗಳೂರಿನ ಇಂಡಿಯಾನಾ ಆಸ್ಪತ್ರೆ,ಕಳೆದ 3 ವರ್ಷಗಳ ಹಿಂದೆ ಚಿತ್ರದುರ್ಗ ಬಸವೇಶ್ವರ ಆಸ್ಪತ್ರೆಯಲ್ಲಿ ಹಾರ್ಟ್‌ಸೆಂಟರ್‌ನ್ನು ಸ್ಥಾಪಿಸಿದರು. ಈಗ ಕ್ಲಿನಿಕ್‌ನ್ನೂ ಪ್ರಾರಂಭಿಸುವ ಮೂಲಕ ಹೃದ್ರೋಗಗಳ ನಿಯಂತ್ರಣ ನಿಟ್ಟಿನಲ್ಲಿ ಜನರಿಗೆ ನೆರವಾಗಿದೆ.

ಜಿಲ್ಲೆಯ ಏಕೈಕ ಹೃದ್ರೋಗ ಚಿಕಿತ್ಸಾ ಕೇಂದ್ರ ಹಾರ್ಟ್ ಸೆಂಟರ್‌ನಲ್ಲಿ ಮೂವರು ತಜ್ಞರ ವೈದ್ಯರುವುದು ತ್ವರಿತ,ಪರಿಣಾಮಕಾರಿ ಚಿಕಿತ್ಸೆಗೆ ಅನುಕೂಲವಾಗಿದೆ. ಬದಲಾದ ಜೀವನ ಶೈಲಿಯಿಂದಾಗಿ ಯುವ ಜನರೂ ಸೇರಿದಂತೆ ಹೃದ್ರೋಗಿ ಸಂಖ್ಯೆ ಅಧಿಕವಾಗುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದ ಶಾಸಕರು,ರೋಗಕ್ಕೆ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬರುವ ಮೊದಲೇ ತಜ್ಞರ ಸಲಹೆ ಪಡೆದು ನಿಯಂತ್ರಿಸುವು ದು ಒಳ್ಳೆಯದೆಂದರು.

ಇಂಡಿಯಾನ ಆಸ್ಪತ್ರೆ ಮತ್ತು ಹಾರ್ಟ್ ಇನ್ಸಿಟ್ಯೂಟ್ ಎಂಡಿ ಡಾ.ಯೂಸೂಪ್ ಕುಂಬ್ಳೆ ಮಾತನಾಡಿ,ಹೃದ್ರೋಗದ ಪತ್ತೆಗೆ ಈ ಕ್ಲಿನಿಕ್ ನೆರವಾಗಲಿದೆ. ರೋಗಕ್ಕೆ ಒಳಗಾದ ಮೇಲೆ ಚಿಕಿತ್ಸೆ ಪಡೆಯುವುದು ಇದ್ದೇ ಇರುತ್ತದೆ. ಆದರೆ ಅದರ ಪೂರ್ವದಲ್ಲೇ ಆರೋಗ್ಯ ತಪಾಸಣೆ ಸೂಕ್ತ. ಇಸಿಜಿ,ರಕ್ತ ಪರೀಕ್ಷೆ,ಟಿಎಂಟಿ ಇತ್ಯಾದಿ ಪರೀಕ್ಷೆಗಳಿಂದ ಹೃದಯ ಕಾಯಿಲೆ ಪತ್ತೆ ಮಾಡಬಹುದು. ಇದರಿಂದ ಜೀವಾಪಾಯ ತಪ್ಪಿಸ ಬಹುದು. ನಿತ್ಯ ಬೆಳಗ್ಗೆ 9ರಿಂದ ರಾತ್ರಿ 8ರವರೆಗೆ ಕಾರ‌್ಯನಿರ್ವಹಿಸುವ ಈ ಕ್ಲಿನಿಕ್‌ನಲ್ಲಿ ತಜ್ಞ ವೈದ್ಯ ರೊಬ್ಬರು ಕರ್ತವ್ಯದಲ್ಲಿ ಇರುತ್ತಾರೆ ಎಂ ದರು.

ಡಿಎಚ್‌ಒ ಡಾ.ಆರ್.ರಂಗನಾಥ್,ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಜಿಲ್ಲಾ ಸಂಯೋಜಕ ಡಾ.ಚಂದ್ರಶೇಖರ್ ರಾಜು, ಹೃದ್ರೋಗ ತಜ್ಞರಾದ ಡಾ.ಕಾರ್ತಿಕ್,ಡಾ.ಸುಜಯ್,ಡಾ.ಮಂಜುನಾಥ್,ಹಾರ್ಟ್‌ಸೆಂಟರ್ ಚೀಫ್ ಆಪರೇಟಿಂಗ್ ಆಫೀಸರ್ ರೂಪೇಶ್ ಕುಮಾರ್ ಶೆಟ್ಟಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net