ರಾಜಕಾಲುವೆಗಳ ಹೂಳೆತ್ತಲು ಶಾಸಕ ಟೆಂಗಿನಕಾಯಿ ಸೂಚನೆ

New Mt New MT
Published on

ಹುಬ್ಬಳ್ಳಿ : ಈ ಬಾರಿ ಪ್ರತಿ ವರ್ಷಕ್ಕಿಂತ ಹೆಚ್ಚು ಮಳೆಯಾಗುವುದಾಗಿ ಹವಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಮಳೆಗಾಲದಿಂದ ಉಂಟಾಗುವ ಸಮಸ್ಯೆಗಳನ್ನು ನಿವಾರಿಸಲು ಮಹಾನಗರ ಪಾಲಿಕೆ ಸನ್ನದ್ಧವಾಗಬೇಕು. ಮುಖ್ಯವಾಗಿ ರಾಜಕಾಲುವೆಗಳಲ್ಲಿ ಆಳವಾಗಿ ಹೂಳೆತ್ತುವ ಕಾರ್ಯ ತ್ವರಿತಗತಿಯಲ್ಲಿ ನಡೆಯಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಮಳೆಗಾಲ ಮತ್ತು ತ್ವರಿತ ಅಭಿವೃದ್ಧಿ ಕಾಮಗಾರಿಗಳ ಕುರಿತು ರ್ಚಚಿಸುವುದಕ್ಕಾಗಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅತಿ ಹೆಚ್ಚು ಮಳೆ ಸುರಿದಾಗ ರಾಜಕಾಲುವೆಗಳಿಂದ ಹೊರಬರುವ ಚರಂಡಿ ನೀರು ಅಕ್ಕಪಕ್ಕದ ಬಡಾವಣೆಗಳಿಗೆ ನುಗ್ಗಿ, ಅಲ್ಲಿನ ಜನರಿಗೆ ಸಮಸ್ಯೆ ಉಂಟಾಗುತ್ತದೆ. ಈ ಬಾರಿ ಅಂತಹ ಸಮಸ್ಯೆ ಉದ್ಭವಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಅಧಿಕಾರಿಗಳಿಗೆ ಸೂಚಿಸಿದರು.

ಸೆಂಟ್ರಲ್ ಕ್ಷೇತ್ರದ ಎಲ್ಲ ವಾರ್ಡ್​ಗಳಲ್ಲಿ ಮಳೆಯಿಂದ ಆಗುವ ಸಮಸ್ಯೆಗಳ ಪ್ರದೇಶವನ್ನು ಗುರುತಿಸಿ, ಅವುಗಳ ನಿವಾರಣೆಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಮುಖ್ಯವಾಗಿ ಗೋಕುಲ ರಸ್ತೆಯಿಂದ ಶ್ರೀ ಸಿದ್ಧಾರೂಢ ಸ್ವಾಮಿ ಮಠಕ್ಕೆ ಹೋಗುವ ಆರ್.ಎನ್. ಶೆಟ್ಟಿ ರಸ್ತೆ ಒಳ ಚರಂಡಿ ಹಾಗೂ ಸಿಸಿ ರಸ್ತೆ ಕಾಮಗಾರಿಗಳ ಸಮಸ್ಯೆ ಆಗುವ ಪ್ರದೇಶಗಳನ್ನು ಪಾಲಿಕೆಯ ಆಯುಕ್ತರು ಹಾಗೂ ಅಧಿಕಾರಿಗಳೊಂದಿಗೆ ಜೂ. 12ರಂದು ವೀಕ್ಷಿಸಿ, ನಂತರ ಮತ್ತೆ ಸಭೆ ಕರೆಯಲಾಗುವುದು ಎಂದು ತಿಳಿಸಿದರು.

ಕುಡಿಯುವ ನೀರಿನ ಯೋಜನೆಯನ್ನು ಎಲ್ಲ ವಾರ್ಡಗಳಿಗೆ ವಿಸ್ತರಿಸುವ ಕುರಿತು ಇದೇ ಸಂದರ್ಭದಲ್ಲಿ ರ್ಚಚಿಸಲಾಯಿತು.

ಜೂ. 12 ರಂದು ವಿಶ್ವೇಶ್ವರ ರಸ್ತೆ ಕಾಮಗಾರಿ ವೀಕ್ಷಿಸಿ, ಅಲ್ಲಿ ಸಭೆ ನಡೆಸಲಾಗುವುದು ಎಂದು ಹೇಳಿದರು

ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ವಾರ್ಡ್​ಗಳ ಜನರು, ತಮ್ಮ ವಾರ್ಡ್​ಗಳಲ್ಲಿನ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು. ಅವುಗಳನ್ನು ಶೀಘ್ರ ಬಗೆಹರಿಸುವ ಭರವಸೆಯನ್ನು ಶಾಸಕರು ನೀಡಿದರು.

ಮೇಯರ್ ವೀಣಾ ಬರದ್ವಾಡ, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ, ಉಮೇಶಗೌಡ ಕೌಜಗೆರಿ, ಬೀರಪ್ಪ ಖಂಡೇಕಾರ, ಉಮಾ ಮುಕುಂದ, ರೂಪಾ ಶೆಟ್ಟಿ, ಚಂದ್ರಿಕಾ ಮೇಸ್ತ್ರಿ, ಮೀನಾಕ್ಷಿ ವಂಟಮುರಿ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಮುಖಂಡರಾದ ಸಿದ್ದು ಮೊಗಲಿ ಶೆಟ್ಟರ, ರವಿ ನಾಯಕ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ವಿಜಯಕುಮಾರ, ಸಿ.ವಿ. ಪಾಟೀಲ, ಪಾಲಿಕೆಯ ವಲಯ ಸಹಾಯಕ ಆಯುಕ್ತರು, ಲೋಕೋಪಯೋಗಿ ಇಲಾಖೆ ಮತ್ತು ಎಲ್ ಆಡ್ ಟಿ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net