ಸಾಮಾಜಿಕ ಕಾರ್ಯಗಳಿಗೆ ಜನ್ಮದಿನ ಬಳಸಿಕೊಂಡ ಶಾಸಕ ಟೆಂಗಿನಕಾಯಿ

New MT New
Published on

ಹುಬ್ಬಳ್ಳಿ : ಸಾಮಾಜಿಕ ಕಾರ್ಯಗಳಿಗೆ ವೇದಿಕೆ ಒದಗಿಸುವ ಉದ್ದೇಶದಿಂದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದಾಗಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ.

ತಮ್ಮ ಜನ್ಮದಿನದ ಅಂಗವಾಗಿ ನಗರದ ಖಾಸಗಿ ಹೋಟೆಲ್​ನಲ್ಲಿ ಮಹಾನಗರ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಮಂಗಳವಾರ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರ, ಕೃತಕ ಕಾಲು ಜೋಡಣೆ, ಆರೋಗ್ಯ ತಪಾಸಣೆ ಶಿಬಿರ, ಪೌರ ಕಾರ್ವಿುಕರಿಗೆ ನಿತ್ಯೋಪಯೋಗಿ ವಸ್ತುಗಳ ಕಿಟ್ ವಿತರಣೆಗೆ ಚಾಲನೆ ನೀಡಿ, ಅವರು ಮಾತನಾಡಿದರು.

ಹುಟ್ಟುಹಬ್ಬದಂದು ಹಾರ, ತುರಾಯಿ ಹಾಕುವ ಬದಲು ಬಡ ವಿದ್ಯಾರ್ಥಿಗಳಿಗೆ ನೋಟ್​ಬುಕ್, ಪೆನ್ ಸೇರಿದಂತೆ ಇನ್ನಿತರ ಪಠ್ಯದ ವಸ್ತುಗಳನ್ನು ನೀಡುವಂತೆ ಬಿಜೆಪಿ ಕಾರ್ಯಕರ್ತರು ಹಾಗೂ ತಮ್ಮ ಅಭಿಮಾನಿಗಳಿಗೆ ಸಲಹೆ ನೀಡಿದರು.

ಹುಬ್ಬಳ್ಳಿಯನ್ನು ಪ್ರವಾಸಿತಾಣವನ್ನಾಗಿ ಮಾಡಬೇಕೆಂಬ ಹೆಬ್ಬಯಕೆ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯ ಪ್ರಾರಂಭಿಸಲಾಗಿದೆ. ನೃಪತುಂಗ ಬೆಟ್ಟದಲ್ಲಿ ರೋಪ್ ವೇ, ಜಿಪ್​ಲೈನ್ ನಿರ್ವಿುಸುವ ಉದ್ದೇಶದಿಂದ ದೆಹಲಿಯ ಸಂಸ್ಥೆಯೊಂದಿಗೆ ಮಾತುಕತೆ ನಡೆದಿದೆ. ಉಣಕಲ್ ಕೆರೆಯನ್ನು ಬೋಟಿಂಗ್ ಸ್ಪೋರ್ಟ್ಸ್​ಗಾಗಿ ಬಳಸಿಕೊಳ್ಳಲು ಚಿಂತನೆ ನಡೆದಿದೆ ಎಂದು ಹೇಳಿದರು.

ಬೆಂಗಳೂರು ಮಹಾನಗರದ ನಂತರ ಹುಬ್ಬಳ್ಳಿಯಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಉತ್ತಮ ಅವಕಾಶಗಳಿವೆ. ಉತ್ತರ ಕರ್ನಾಟಕದಲ್ಲಿ ಹಲವಾರು ಇಂಜಿನಿಯರಿಂಗ್, ಎಂಬಿಎ ಕಾಲೇಜುಗಳಿವೆ ಎಂದರು.

ಹಲವು ಅಂಗವಿಕಲರಿಗೆ ಕೃತಕ ಕಾಲು ಜೋಡಣೆ ಮಾಡಲಾಯಿತು. 120ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.

ವಾಲಿ ಗುರೂಜಿ, ಜಿಲ್ಲಾಧಿಕಾರಿ ದಿವ್ಯಪ್ರಭು, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ಸಂತೋಷ ಚವ್ಹಾಣ, ರೂಪಾ ಶೆಟ್ಟಿ, ಬೀರಪ್ಪ ಖಂಡೇಕಾರ, ಶಿವು ಮೆಣಸಿನಕಾಯಿ, ಸೀಮಾ ಲದ್ವಾ, ಮೀನಾಕ್ಷಿ ಒಂಟಮುರಿ, ರಾಜಣ್ಣ ಕೊರವಿ, ವೀಣಾ ಬರದ್ವಾಡ, ಬಿಜೆಪಿಯ ಅಕ್ಕಮ್ಮ ಹೆಗಡೆ, ಅಶೋಕ ವಾಲ್ಮೀಕಿ, ವೆಂಕಟೇಶ ಕಾಟವೆ, ಪ್ರಶಾಂತ ಹಾವಣಗಿ, ದೀಪಕ ಮೆಹರವಾಡೆ, ಮೇನಕಾ ಹುರಳಿ, ಸಿದ್ದು ಮೊಗಲಿಶೆಟ್ಟರ, ಪ್ರಭು ನವಲಗುಂದಮಠ, ರವಿ ನಾಯಕ, ರಾಜು ಕಾಳೆ, ರವಿರಾಜ ಕೊಡ್ಲಿ, ಮೋಹನಲಾಲ್ ಜೈನ್, ಚೇತನ ಬರದ್ವಾಡ, ಪ್ರಕಾಶ ಕ್ಯಾರಕಟ್ಟಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net