

ಹುಬ್ಬಳ್ಳಿ : ಬೆಳೆವಿಮೆ ಪರಿಹಾರದಿಂದ ವಂಚಿತರಾಗಿರುವ ಇಲ್ಲಿನ ಉಣಕಲ್ ಹಾಗೂ ಬೈರಿದೇವರಕೊಪ್ಪದ ರೈತರ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ಶಾಸಕ ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ಮಂಗಳವಾರ ಜರುಗಿತು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಉಣಕಲ್ ಹಾಗೂ ಬೈರಿದೇವರಕೊಪ್ಪದ ರೈತರು 2018ರಿಂದ ಬೆಳೆವಿಮೆ ಪರಿಹಾರದಿಂದ ವಂಚಿತರಾಗಿದ್ದಾರೆ. ಈ ಭಾಗದ ರೈತರ ಕೃಷಿ ಜಮೀನುಗಳು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುವುದಿಲ್ಲ ಎಂಬ ಅಧಿಕಾರಿಗಳ ನಿರ್ಲಕ್ಷ್ಯತನದಿಂದಾಗಿ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನವಲಗುಂದ, ಕುಂದಗೋಳ ಭಾಗದ ರೈತರಿಗೆ ಬೆಣ್ಣೆಹಳ್ಳದ ಪ್ರವಾಹದಿಂದ ಬೆಳೆಗಳು ಹಾಳಾಗಿವೆ ಎಂಬ ಕಾರಣಕ್ಕೆ ಬೆಳೆವಿಮೆ ಪರಿಹಾರ ನೀಡಲಾಗಿದೆ. ಹುಬ್ಬಳ್ಳಿ-ಧಾರವಾಡದಲ್ಲಿಯೂ ಹೆಚ್ಚಿನ ಮಳೆಯಾಗಿದ್ದು, ಪಾಲಿಕೆ ವ್ಯಾಪ್ತಿಯ ರೈತರ ಜಮೀನುಗಳಿಗೂ ಬೆಳೆವಿಮೆ ಪರಿಹಾರ ನೀಡಬೇಕು ಎಂದು ಶಾಸಕರು ಸೂಚಿಸಿದರು.
ಉಣಕಲ್ ರೈತರಾದ ಚನ್ನು ಪಾಟೀಲ, ರಾಜಣ್ಣ ಕೊರವಿ, ಉಮೇಶಗೌಡ ಕೌಜಗೇರಿ, ಶಂಕ್ರಪ್ಪ ಚಿಲ್ಲಣ್ಣವರ, ನಾಗೇಶ ನವಲಗುಂದ, ಬಾಬಣ್ಣ ಹುಟಗಿ, ಬೈರಿದೇವರಕೊಪ್ಪದ ಮಲ್ಲಿಕಾರ್ಜುನ ಗುಂಡೂರ ಹಾಗೂ ಇನ್ನಿತರರು ಮಾತನಾಡಿ, ಕೃಷಿ ಇಲಾಖೆಯವರು ಸರಿಯಾದ ಸಮೀಕ್ಷೆ ನಡೆಸುತ್ತಿಲ್ಲ ಎಂದು ದೂರಿದರು.
ಈ ಭಾಗದ ರೈತರು ಸೋಯಾಬಿನ್. ಉದ್ದು ಮತ್ತು ಹೆಸರು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಆದರೆ, ಕೃಷಿ ಇಲಾಖೆಯವರು ಸರ್ಕಾರಕ್ಕೆ ನೀಡುತ್ತಿರುವ ತಪು್ಪ ಮಾಹಿತಿಯಿಂದಾಗಿ ಬೆಳೆವಿಮೆ ಪರಿಹಾರ ಬರುತ್ತಿಲ್ಲ ಎಂದು ಆರೋಪಿಸಿದರು.
ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ಮಂಜುನಾಥ ಅತ್ತರವಳ್ಳಿ ಮಾತನಾಡಿ, ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆ ಹಾನಿ ಬಗ್ಗೆ ಸಮೀಕ್ಷೆ ನಡೆಸಿ, ಆಪ್ಗಳಲ್ಲಿ ಫೋಟೊ ಸಮೇತ ಮಾಹಿತಿಯನ್ನು ಅಪ್ಲೋಡ್ ಮಾಡಲಾಗುವುದು. ಈ ಸಂದರ್ಭದಲ್ಲಿ ಸಂಬಂಧಿಸಿದ ರೈತರು ತಮ್ಮ ಹೊಲಗಳಲ್ಲಿ ಹಾಜರಿರಬೇಕು ಎಂದು ತಿಳಿಸಿದರು.
ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಎಂ.ಡಿ ಮೆಣಸಿನಕಾಯಿ, ಶಿವು ಪಾಟೀಲ, ತಹಶೀಲ್ದಾರ ಮಹೇಶ್ ಅಸ್ತೆ, ಕೃಷಿ ಇಲಾಖೆ ಅಧಿಕಾರಿಗಳಾದ ಮಂಜುಳಾ, ಶ್ರೀನಿವಾಸ, ಪರಶುರಾಮ ಹೊಂಬಳ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಇತರರು ಹಾಜರಿದ್ದರು.