ಸೆಂಟ್ರಲ್ ಕ್ಷೇತ್ರದಲ್ಲಿ ಬಡವರಿಗೆ ಮನೆ ನಿರ್ವಿುಸಲು ಶಾಸಕ ಟೆಂಗಿನಕಾಯಿ ಆಗ್ರಹ

Mahesh Tenginakayi
Published on

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ವ್ಯಾಪ್ತಿಯಲ್ಲಿ ಕನಿಷ್ಠ 10 ಎಕರೆ ಭೂಮಿ ಖರೀದಿಸಿ, ಬಡವರಿಗೆ ಜಿ ಪ್ಲಸ್ ತ್ರಿ ಮಾದರಿಯಲ್ಲಿ ಮನೆ ಕಟ್ಟಿಸಿಕೊಡುವಂತೆ ಶಾಸಕ ಮಹೇಶ ಟೆಂಗಿನಕಾಯಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಶುಕ್ರವಾರ ಮಾತನಾಡಿದ ಶಾಸಕ ಟೆಂಗಿನಕಾಯಿ, ಆಶ್ರಯ ಮನೆಗಳನ್ನು ಕೊಡಿಸುವಂತೆ ನಿತ್ಯ ಸಾವಿರಾರು ಬಡವರು ನನ್ನ ಮನೆಗೆ ಅರ್ಜಿ ಹಿಡಿದುಕೊಂಡು ಬರುತ್ತಿದ್ದಾರೆ. ಅವರಿಗೆ ಜಿ ಪ್ಲಸ್ ತ್ರಿ ಮಾದರಿಯ ಮನೆಗಳನ್ನು ಸರ್ಕಾರದಿಂದ ಕಟ್ಟಿಕೊಡಬೇಕು ಎಂದು ಮನವಿ ಮಾಡಿದರು.

ಸೆಂಟ್ರಲ್ ಕ್ಷೇತ್ರದಲ್ಲಿ ಭೂಮಿ ಮಂಜೂರು ಮಾಡುವುದು ಕಷ್ಟವೆಂದು ಪ್ರತಿಕ್ರಿಯೆ ನೀಡಿದ ಸಚಿವ ದಿನೇಶ ಗುಂಡೂರಾವ್, ಪಕ್ಕದ ಕ್ಷೇತ್ರದಲ್ಲಿ ಭೂಮಿ ಮಂಜೂರು ಮಾಡಲು ಚಿಂತಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಸೆಂಟ್ರಲ್ ಕ್ಷೇತ್ರದಲ್ಲಿ ಲ್ಯಾಂಡ್ ಬ್ಯಾಂಕ್ ಇಲ್ಲ. ಈ ಭಾಗದಲ್ಲಿ ಜಮೀನು ಖರೀದಿಸಲು ಸರ್ಕಾರಿ ಮೊತ್ತ ಪ್ರತಿ ಎಕರೆಗೆ 37 ಲಕ್ಷ ರೂ. ಇದೆ. ಆದರೆ, ಇಲ್ಲಿ ಎಕರೆಗೆ ಒಂದು ಕೋಟಿ ರೂ.ಗೂ ಹೆಚ್ಚಿನ ಬೆಲೆ ನಡೆಯುತ್ತಿದೆ. ಹೀಗಾಗಿ, ಸರ್ಕಾರ ಭೂಮಿಯ ದರವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net