1440 ಗುಂಪು ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆಗೆ ಶಾಸಕ ಟಿ.ಎಸ್.ಶ್ರೀವತ್ಸ ಕಾರಣ

WhatsApp Image 2024-03-15 at 8.54.54 PM
Published on

ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಫಲಾನುಭವಿಗಳಿಗೆ 1440 ಗುಂಪು ಮನೆಗಳಿಗಾಗಿ ಇತ್ತೀಚೆಗೆ ಲಲಿತಾದ್ರಿಪುರ ಗ್ರಾಮದಲ್ಲಿ ಶಂಕುಸ್ಠಾಪನೆ ನೇರವೇರಿದ್ದು, 10 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆ ಚಾಲನೆಗೆ ಶಾಸಕ ಟಿ.ಎಸ್.ಶ್ರೀವತ್ಸ ಅವರ ಸತತ ಪರಿಶ್ರಮವೇ ಕಾರಣ ಎಂದು ಬಿಜೆಪಿ ಮಾಧ್ಯಮ ವಕ್ತಾರ ಎಂ.ಎ.ಮೋಹನ್ ತಿಳಿಸಿದ್ದಾರೆ.

ಈ ಯೋಜನೆಯ ಫಲಾನುಭವಿಗಳು ಕೃಷ್ಣರಾಜ ಕ್ಷೇತ್ರದವರಾಗಿದ್ದರೂ ಯೋಜನೆ ಕಾರ್ಯರೂಪಕ್ಕೆ ಬರುತ್ತಿರುವುದು ಮಾತ್ರ ಪಕ್ಕದ ವರುಣ ಕ್ಷೇತ್ರದ ವ್ಯಾಪ್ತಿಯ ಲಲಿತಾದ್ರಿಪುರ ಗ್ರಾಮಕ್ಕೆ ಸೇರಿದ ಜಮೀನಿನಲ್ಲಿ. ಹಾಗಾಗಿ, ವರುಣ ಕ್ಷೇತ್ರದ ಅಂದಿನ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ತಕರಾರು ತೆಗೆದ ಕಾರಣ ಯೋಜನೆ ಸ್ಥಗಿತಗೊಂಡಿತ್ತು. ನಂತರ ಮತ್ತೆ ಕಳೆದ ವರ್ಷ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರೂ ಯೋಜನೆಗೆ ಚಾಲನೆ ಸಿಗಲೇ ಇಲ್ಲ. ಇದೀಗ ಶಾಸಕ ಶ್ರೀವತ್ಸ, ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚಿಸಿದ್ದಾರೆ. ಬಳಿಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಎರಡು ಕ್ಷೇತ್ರದ ಬಡವರಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸಲಾಗಿದೆ. ಕೃಷ್ಣರಾಜ ಕ್ಷೇತ್ರಕ್ಕೆ 940 ಮನೆ ಹಾಗೂ ವರುಣ ಕ್ಷೇತ್ರಕ್ಕೆ 500 ಮನೆ ಎಂದು ರಾಜಿ ಸೂತ್ರ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net