ಪ್ರಜ್ವಲ್ ಪರ ಶಾಸಕ ಸ್ವರೂಪ್ ಮತಯಾಚನೆ

20_HSN_04
ಹಾಸನ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಶಾಸಕ ಸ್ವರೂಪ್ ಮತಯಾಚನೆ ಮಾಡಿದರು. ಸ್ವಾಮಿಗೌಡ, ಶಿವಣ್ಣ ಇತರರು ಇದ್ದರು.
Published on

ಹಾಸನ : ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರವಾಗಿ ಶಾಸಕ ಸ್ವರೂಪ್ ತಾಲೂಕಿನ ವಿವಿಧ ಭಾಗಗಳಲ್ಲಿ ಶನಿವಾರ ಪ್ರಚಾರ ನಡೆಸಿದರು.
ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಿಡುಡಿ, ದೊಡ್ಡ ಹೊನ್ನೇನಹಳ್ಳಿ, ಯಡಿಯೂರು, ತೇಜೂರು ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪ್ರಜ್ವಲ್ ರೇವಣ್ಣ ಪರ ಮತಯಾಚನೆ ಮಾಡಿದರು. ನಗರಸಭೆ ಮಾಜಿ ಅಧ್ಯಕ್ಷ ಅನಿಲ್ ಕುಮಾರ್ ಶಾಸಕ ಸ್ವರೂಪ್ ಅವರಿಗೆ ಸಾಥ್ ನೀಡಿದರು.
ಸ್ವರೂಪ್ ಮಾತನಾಡಿ, ಜಿಲ್ಲೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಶಾಸಕ ಎಚ್.ಡಿ.ರೇವಣ್ಣ ಹಾಗೂ ನಮ್ಮ ತಂದೆ ದಿ.ಎಚ್.ಎಸ್.ಪ್ರಕಾಶ್ ಅವರ ಕೊಡುಗೆ ಅಪಾರ. ಇದನ್ನು ಆಧರಿಸಿ ಈ ಬಾರಿ ಮೈತ್ರಿ ಅಭ್ಯರ್ಥಿ ಪರ ಮತದಾರರು ಮತಯಾಚನೆ ಮಾಡಬೇಕು ಎಂದರು.
ಜಿಲ್ಲೆಯ ಪ್ರತಿ ಹಳ್ಳಿಗೆ ಮೂಲ ಸೌಕರ್ಯ ಕಲ್ಪಿಸಿ ಜಿಲ್ಲೆಯ ಜನರಿಗೆ ಅನುಕೂಲ ಕಲ್ಪಿಸಲು ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳು, ಸರ್ಕಾರಿ ಶಾಲಾ, ಕಾಲೇಜುಗಳು, ರೈಲ್ವೆ, ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು ಸೇರಿದಂತೆ ಎಲ್ಲ ಇಲಾಖೆಗಳಲ್ಲೂ ತಮ್ಮದೇ ಆದ ಕೊಡುಗೆಗಳನ್ನು ನೀಡುವ ಮೂಲಕ ಜಿಲ್ಲೆಯನ್ನು ರಾಜ್ಯವೇ ಗುರುತಿಸುವಂತೆ ಮಾಡಿದ್ದಾರೆ ಎಂದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮುಂದಾಗಿರುವ ಜೆಡಿಎಸ್‌ಗೆ ಈ ಬಾರಿ ಮತ್ತೆ ಶಕ್ತಿ ತುಂಬುವ ಮೂಲಕ ಇನ್ನಷ್ಟು ಕೆಲಸ ಮಾಡಲು ಈ ಬಾರಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಅವರಿಗೆ ಮತ ನೀಡಬೇಕು. ಈ ಮೂಲಕ ಕೇಂದ್ರದಲ್ಲಿ ನರೇಂದ್ರ ಮೋದಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕನಿಷ್ಠ 20 ಸಾವಿರಕ್ಕೂ ಅಧಿಕ ಮತಗಳನ್ನು ನೀಡಿ ಪ್ರಜ್ವಲ್ ರೇವಣ್ಣ ಅವರನ್ನು ಗೆಲ್ಲಿಸಲು ಪಣ ತೊಟ್ಟಿದ್ದೇವೆ. ಜಿಲ್ಲೆಯ ಜನರು ಕೂಡ ಪ್ರಜ್ವಲ್ ಪರ ಒಲವು ತೋರಿದ್ದಾರೆ ಎಂದರು.
ಹಾಸನ ಹಾಲು ಒಕ್ಕೂಟದ ನಿರ್ದೇಶಕ ಸ್ವಾಮಿಗೌಡ, ಚಿಕ್ಕಹೊನ್ನೇನಹಳ್ಳಿ ಶಿವಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net