

ಉಡುಪಿ: ಪರಶುರಾಮ ಥೀಂ ಪಾರ್ಕ್ ಹಾಗೂ ಪ್ರತಿಮೆಯ ಬಗ್ಗೆ ಕಾಂಗ್ರೆಸಿಗರು ನಡೆಸುತ್ತಿದ್ದ ನಿರಂತರ ಅಪಮಾನಕ್ಕೆ ಸೋಲಾಗಿದೆ. ಪ್ರತಿಮೆ ಫೈಬರ್ ಎಂಬ ಅಪಪ್ರಚಾರ ಸುಳ್ಳು ಎಂಬುದು ಪೊಲೀಸ್ ತನಿಖೆಯಿಂದಲೇ ಸಾಬೀತಾಗಿದೆ. ಕಾಂಗ್ರೆಸ್ ವ್ಯವಸ್ಥಿತ ಪಿತೂರಿ ಮೂಲಕ ಕಾರ್ಕಳ ಪ್ರವಾಸೋದ್ಯಮ ವ್ಯವಸ್ಥಿತವಾಗಿ ಹಾಳು ಮಾಡಿದೆ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಮೆಯನ್ನು ಹಿತ್ತಾಳೆಯಿಂದ ನಿರ್ಮಿಸಲಾಗಿದೆ ಎಂದು ಕಾರ್ಕಳ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ. ಜತೆಗೆ ಪರಶುರಾಮನ ಪ್ರತಿಮೆಯ ಸೊಂಟದ ಮೇಲ್ಭಾಗವನ್ನು ಮರು ವಿನ್ಯಾಸ ಉದ್ದೇಶದಿಂದ ತೆಗೆದಿದ್ದು ಎಂಬುದನ್ನೂ ನ್ಯಾಯಲಯಕ್ಕೆ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಸರ್ಕಾರ ಬಾಕಿ ಹಣವನ್ನು ಶ್ರೀವಾಗಿ ಬಿಡುಗಡೆಗೊಳಿಸಬೇಕು. ಈ ತಾಣವನ್ನು ಪ್ರವಾಸೋದ್ಯಮಕ್ಕೆ ಮತ್ತೆ ತೆರೆಯಬೇಕು. ಅಭಿವೃದ್ಧಿ ವಿಚಾರದಲ್ಲಿ ದ್ವೇಷದ ರಾಜಕಾರಣ ಸಲ್ಲದು ಎಂದರು.
ಕಾರ್ಕಳ ಕಾಂಗ್ರೆಸ್ ಕಟ್ಟುಕತೆಗಳನ್ನು ವಿಮರ್ಶೆ ಮಾಡದೆ ರಾಜ್ಯ ನಾಯಕರು ಆರೋಪ ಮಾಡಿದ್ದಾರೆ. ಸ್ವತ@ ಡಿಸಿಎಂ ಶಿವಕುಮಾರ್ ಈ ವಿವಾದವನ್ನು ಚುನಾವಣೆವರೆಗೆ ಜೀವಂತವಿಡುವ ಮಾತನಾಡಿದ್ದಾರೆ. ವಿಪಕ್ಷದ ಮುಖಂಡರನ್ನು ತನಿಖೆ ನೆಪದಲ್ಲಿ ಟಾರ್ಗೆಟ್ ಮಾಡುವ ಭಾಗವಾಗಿ ಥೀಂ ಪಾರ್ಕ್ ವಿವಾದ ಹುಟ್ಟುಹಾಕಲಾಗಿದೆ ಎಂದರು.
ಮೂರ್ತಿಗೆ ಬಳಸಿದ ಲೋಹ ಯಾವುದು ಎಂಬುದನ್ನು ತಿಳಿದುಕೊಳ್ಳಲು 2.5 ವರ್ಷ ಬೇಕಾಯಿತು. ಗುಣಮಟ್ಟದಲ್ಲಿ ವ್ಯತ್ಯಾಸವಾಗಿದ್ದರೆ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕೋರಿದ್ದೇನೆ. ಆದರೆ ಕಾಂಗ್ರೆಸಿಗರು ಕಾರ್ಕಳಕ್ಕೆ ಅಪಮಾನ ಮಾಡಲು ಮತ್ತು ಅಭಿವೃದ್ಧಿಗೆ ಅಡ್ಡಗಾಲು ಹಾಕುವ ಉದ್ದೇಶದಿಂದ ನಿರಂತರ ಅಪಪ್ರಚಾರದಲ್ಲಿ ನಿರತರಾಗಿದ್ದರು. ಸರ್ಕಾರಕ್ಕೆ ಈ ಕೆಲಸ ಪೂರ್ಣಗೊಳಿಸುವ ಇಚ್ಛೆ ಇಲ್ಲವಾದರೆ ಬಿಟ್ಟುಬಿಡಲಿ, ನಾವು ಜನರಿಂದ ಭಿಕ್ಷೆ ಬೇಡಿ ಆದರೂ ನಿಮಾರ್ಣ ಮಾಡುತ್ತೇವೆ ಎಂದರು.