

ಉಡುಪಿ: ಮುಖ್ಯಮಂತ್ರಿಗಳು ಮತ್ತು ರಾಜ್ಯ ಸರ್ಕಾರದ ಕಾರ್ಯವೈಕಾರಿಯ ಬಗ್ಗೆ ಸ್ವಪಕ್ಷದಲ್ಲೇ ಆಂತರಿಕ ಅಸಮಾಧಾನ ಇದೆ. ರಾಜ್ಯದಲ್ಲಿರೋದು ಎಂ ಪ್ಲಸ್ ಎಂ ಸರ್ಕಾರ. ಮುಸಲ್ಮಾನ್ ಮತ್ತು ಮನಿಗೆ ಕಾಂಗ್ರೆಸ್ ಆದ್ಯತೆ. ಮುಸಲ್ಮಾನರಿಗೆ ಆಶ್ರಯ ಮನೆಯಲ್ಲಿ ಶೇ. 15 ಮೀಸಲು ನೀಡುತ್ತಿದೆ. ಜನಸಾಮಾನ್ಯರಿಗೆ ಮನೆ ಕಟ್ಟಲು ಹಣ ಕೊಡಬೇಕು. ಎಲ್ಲಾ ಕ್ಷೇತ್ರದಲ್ಲೂ ಸುಲಿಗೆ ಮಾಡುತ್ತಿದ್ದಾರೆ. ಇದು ರಜಾಕರಿಗಿಂತ ಕ್ರೂರ. ತೆರಿಗೆ ಹಾಕುವುದು ಸುಲಿಗೆ ಮಾಡುವುದು ರಜಾಕರ ಪದ್ಧತಿ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶಾಸಕ ವಿ. ಸುನೀಲ್ ಕುಮಾರ್ ಹೇಳಿದರು.
ಕಾಂಗ್ರೆಸ್ ಶಾಸಕರಾದ ಬಿ.ಆರ್ ಪಾಟೀಲ್, ರಾಜು ಕಾಗೆ ಸರ್ಕಾರದ ವಿರುದ್ಧ ಸಮಾಧಾನ ಹೊರಹಾಕಿದ್ದಾರೆ. ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಹಣ ಕೊಟ್ರೆ ಮನೆ ಬಗ್ಗೆ ಚರ್ಚೆಯಾಗುತ್ತಿದೆ. ಶಿವಮೊಗ್ಗದ ಶಾಸಕರು ಜಮೀರ್ ಅಹಮದ್ ರಾಜೀನಾಮೆ ಕೇಳಿದ್ದಾರೆ. ರಾಜ್ಯದಲ್ಲಿ ಶೂನ್ಯ ಅಭಿವೃದ್ಧಿ ಮತ್ತು ಶೇ. 60 ಭ್ರಷ್ಟಾಚಾರವಿದೆ ಎಂದು ಹೇಳಿದರು.
ಬೆದರಿಕೆ ತಂತ್ರ
ಸರ್ಕಾರದ ವಿರುದ್ಧ ಧ್ವನಿ ಎತ್ತಿದರೆ ಎ್ಐಆರ್ ಹಾಕಲಾಗುತ್ತಿದೆ. ಹಿಂದೂ ಕಾರ್ಯಕರ್ತರನ್ನು ಮೊದಲು ಟಾರ್ಗೆಟ್ ಮಾಡಿದರು. ಗಡಿಪಾರು ಬೆದರಿಸುವ ಪ್ರಯತ್ನ ಆಯಿತು. ಈಗ ಕಾರ್ಯಕ್ರಮಕ್ಕೆ ಅಡ್ಡಿ ಮಾಡುತ್ತಿದ್ದಾರೆ. ಕುಂದಾಪುರದಲ್ಲಿ ಸೂಲಿಬೆಲೆಯವರಿಗೆ ಹಾಗೂ ಬಾಗಲಕೋಟೆಯಲ್ಲಿ ಶ್ರೀಕಾಂತ್ ಅವರಿಗೆ ಅಡ್ಡಿ ಮಾಡಿದರು. ಈಗ ಹಿರಿಯರಾದ ಮೋಹನ್ ದಾಸ್ ಪೈ ಮೇಲೆ ಎ್ ಐ ಆರ್ ಹಾಕಲು ಹೊರಟಿದ್ದಾರೆ. ತುರ್ತು ಪರಿಸ್ಥಿತಿಗೆ 50 ವರ್ಷವಾದರೂ ಕಾಂಗ್ರೆಸ್ ಅದೇ ಮನಸ್ಥಿತಿಯಲ್ಲಿದೆ. ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿ ಮಣ್ಣುಮುಕ್ಕಿದ್ದರು. ಇದೇ ರೀತಿಯಾದರೆ ರಾಜ್ಯದಲ್ಲಿ ಕಾಂಗ್ರೆಸ್ ಕೂಡ ಮಣ್ಣುಮುಕ್ಕುತ್ತದೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರ ಟೀಕೆಯನ್ನು ಎದುರಿಸಲು ಸಿದ್ದವಿರಬೇಕು ಎಂದು ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ.
ಪ್ರತಿಭಟನೆ ರಾಜ್ಯಾದ್ಯಂತ ವಿಸ್ತರಣೆ
ಕರಾವಳಿಯಲ್ಲಿ ಪ್ರತಿ ಗ್ರಾಪಂನಲ್ಲಿ ರಾಜ್ಯ ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಜನಾಕ್ರೋಶ ವ್ಯಕ್ತವಾಗಿದೆ. ಎರಡು ಜಿಲ್ಲೆಯಲ್ಲಿ 40 ಸಾವಿರಕ್ಕೂ ಅಧಿಕಮಂದಿ ಪಂಚಾಯತ್ ಮುಂದೆ ಪ್ರತಿಭಟಿಸಿದ್ದಾರೆ. ಜನಸಾಮಾನ್ಯರ ಐದು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟಿಸಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಈ ಪ್ರತಿಭಟನೆ ವಿಸ್ತರಿಸಲಾಗುವುದು ಎಂದರು.
ಹೆಬ್ಬಾಳ್ಕರ್ಗೆ ತಿರುಗೇಟು
ಇಂಧನ ಇಲಾಖೆ ಬಗ್ಗೆ ಚರ್ಚೆ ಮಾಡುವುದಾದರೆ ಎರಡು ವರ್ಷ ಯಾಕೆ ಬಾಯಿ ಮುಚ್ಚಿ ಕುಳಿತಿದ್ದಾರೆ? ನಮಗೆ ಅಭಿವೃದ್ಧಿ ಸಚಿವರು ಬೇಕು. ವಿಸಿಟಿಂಗ್ ಡಾಕ್ಟರ್ ಬೇಡ. ಅಪರೂಪಕೊಮ್ಮೆ ಜಿಲ್ಲೆಗೆ ಬರುವ ಸಚಿವರು ಬೇಡ. ಎರಡು ವರ್ಷದಲ್ಲಿ ಈ ಸರ್ಕಾರದಿಂದ ಉಡುಪಿಯಲ್ಲಿ ಏನು ಅಭಿವೃದ್ಧಿಯಾಗಿದೆ ಎಂಬ ಬಗ್ಗೆ ಚರ್ಚೆಯಾಗಲಿ. ಹೊಸ ರಸ್ತೆ, ಹೊಸ ಅಂಗನವಾಡಿ,
ಖಾಲಿ ಹುದ್ದೆಗಳು ಭರ್ತಿ ಏನು ಮಾಡಿದ್ದೀರಿ ಹೇಳಿ? ಉಡುಪಿಗೆ ಈ ಸರ್ಕಾರದಿಂದ ಶೂನ್ಯ ಕೊಡುಗೆ ಎಂದು ಅವರು ಹೇಳಿದರು.