ಸ್ಥಳೀಯ ಆಡಳಿತ ಚುಕ್ಕಾಣಿಗೆ ಶ್ರಮ: ಶಾಸಕ ಸುಕುಮಾರ ಶೆಟ್ಟಿ

sukumar new
Published on

ಬೈಂದೂರು: ದೇಶಾದ್ಯಂತ ವ್ಯಾಪಿಸುತ್ತಿರುವ ಬಿಜೆಪಿ ಅಲೆಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ವಿಸ್ತರಿಸಿ ಸ್ಥಳೀಯ ಆಡಳಿತ ಚುಕ್ಕಾಣಿ ಕೈಗೆ ಸಿಗುವವರೆಗೂ ಕಾರ್ಯಕರ್ತರು ವಿರಮಿಸದೆ ಶ್ರಮಿಸುವುದು ಇಂದಿನ ಅಗತ್ಯವಾಗಿದೆ ಎಂದು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು.

ಬುಧವಾರ ಕೆರ್ಗಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಕುಟುಂಬ ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ, ಪ್ರಧಾನಿ ಆಡಳಿತ ವೈಖರಿಯಿಂದ ಕಾಂಗ್ರೆಸ್ ಮೂಲೆಗುಂಪಾಗಿದ್ದು, ಇತ್ತೀಚೆಗೆ ನಡೆದ ಬಿಹಾರ ವಿಧಾನಸಭೆ ಹಾಗೂ ಇತರ ರಾಜ್ಯಗಳ ಉಪಚುನಾವಣೆಯಿಂದ ಸಾಬೀತಾಗಿದೆ. ರಾಜ್ಯ ಕಾಂಗ್ರೆಸ್ ಇಬ್ಭಾಗವಾಗಿ ಒಡೆದ ಮನೆಯಾಗಿದೆ. ಪ್ರಸ್ತುತ ಗ್ರಾಪಂ ಚುನಾವಣೆ ಸಮೀಪಿಸುತ್ತಿದ್ದು, ಗ್ರಾಪಂ ಆಡಳಿತದಲ್ಲಿಯೂ ಪರಿವರ್ತನೆಯಾದಾಗ ಮಾತ್ರ ಆಮೂಲಾಗ್ರ ಬದಲಾವಣೆ ತರಲು ಸಾಧ್ಯ ಎಂದರು.

ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ನೆಲ್ಯಾಡಿ ದೀಪಕ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೆರ್ಗಾಲು ಚರುಮಕ್ಕಿ ಶ್ರೀಮತಿ ವೆಂಕಮ್ಮ ಗಾಣಿಗ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಮ್ಯಾನೆಜಿಂಗ್ ಟ್ರಸ್ಟಿ ದಿನೇಶ ಗಾಣಿಗ ಅವರು ಪಕ್ಷದ ಹಿರಿಯ ಕಾರ್ಯಕರ್ತ ರಾಮಕೃಷ್ಣ ಗಾಣಿಗ ಹಾಗೂ ಶಾಸಕರನ್ನು ಗೌರವಿಸಿದರು.

ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಬಾಲಚಂದ್ರ ಭಟ್, ಜಿಪಂ ಸದಸ್ಯ ಸುರೇಶ ಬಟ್ವಾಡಿ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶರತ್‌ಕುಮಾರ್ ಶೆಟ್ಟಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಭಾಗೀರಥಿ ಸುರೇಶ್, ಶಕ್ತಿಕೇಂದ್ರದ ಕಿಶೋರ ಶೆಟ್ಟಿ, ಯೋಗೀಶ್ ಭಟ್, ರವಿ ಗಾಣಿಗ ಕೆಂಚನೂರು, ರಮೇಶ ಪೂಜಾರಿ, ಚಂದ್ರ ದೇವಾಡಿಗ ಉಪಸ್ಥಿತರಿದ್ದರು. ಮಂಡಲ ಪ್ರಧಾನ ಕಾರ್ಯದರ್ಶಿಯಾದ ಪ್ರಿಯದರ್ಶಿನಿ ಬೆಸ್ಕೂರು ಸ್ವಾಗತಿಸಿ, ಪ್ರಕಾಶ್ ಪೂಜಾರಿ ಜೆಡ್ಡು ವಂದಿಸಿದರು.

ಗ್ರಾಮ ದತ್ತು ಭರವಸೆ

ಮುಂದಿನ ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿರುವ ಕೆರ್ಗಾಲು ಗ್ರಾಮವನ್ನು ಕಾಂಗ್ರೆಸ್ ಮುಕ್ತ ಮಾಡುವ ಮೂಲಕ ಬಿಜೆಪಿ ಬಲಪಡಿಸಿ ಜಾತಿ, ಮತ ಭೇದ ಎಣಿಸದೆ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದ ಶಾಸಕ ಸುಕುಮಾರ ಶೆಟ್ಟಿ, ಇಲ್ಲಿನ 12 ಸೀಟುಗಳು ಬಿಜೆಪಿ ಬೆಂಬಲಿತರು ಗೆದ್ದರೆ ಗ್ರಾಮವನ್ನು ದತ್ತು ಪಡೆಯುವುದಾಗಿ ಘೋಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net