

ಚಳ್ಳಕೆರೆ: ಸಾಮಾಜಿಕ ನ್ಯಾಯ ಪರಿಪಾಲನೆ ಆಡಳಿತ ನೀಡಿರುವ ಡಿ.ದೇವರಾಜ ಅರಸು ರಾಜಕಾರಣದಲ್ಲೂ ಆದರ್ಶ ನಾಯಕರಾಗಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮಂಗಳವಾರ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು, ಶಿವಶರಣ ನುಲಿಯ ಚಂದಯ್ಯ, ಬ್ರಹ್ಮಶ್ರೀ ನಾರಾಯಣಗುರು ಅವರ ಜಯಂತ್ಯುತ್ಸವದಲ್ಲಿ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಅರಸು ಆಡಳಿತದಲ್ಲಿ ಜಾರಿ ಮಾಡಿದ ಸಾಮಾಜಿಕ ಪಿಂಚಣಿ, ಭೂ ಸುಧಾರಣೆ, ಉಳುವವನೇ ಭೂ ಒಡೆಯ, ಜೀತ ಪದ್ಧತಿ ನಿರ್ಮೂಲನೆ ಸೇರಿ 20 ಅಂಶಗಳ ಕಾರ‌್ಯಕ್ರಮಗಳು ಈಗಲೂ ಸಮಾಜ ಸುಧಾರಣೆಗೆ ಆಧಾರವಾಗಿವೆ.
ಅವರು ನೀಡಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಸಣ್ಣ ಸಮುದಾಯ ರಾಜಕೀಯ ಮತ್ತು ಶೈಕ್ಷಣಿಕ ಸೌಲಭ್ಯ ಪಡೆದುಕೊಳ್ಳುವ ಅರ್ಹತೆ ಸಿಕ್ಕಂತಾಗಿದೆ ಎಂದರು.
12ನೇ ಶತಮಾನದ ಬಸವಣ್ಣನವರ ವಚನ ಚಳವಳಿಯಲ್ಲಿ ನುಲಿಯ ಚಂದಯ್ಯ, ಭಕ್ತಿ ಮಾರ್ಗದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅವರ ಬದುಕಿನ ಆದರ್ಶ ಸಮಾಜದಲ್ಲಿ ಉಳಿಯಬೇಕಿದೆ. ಬದುಕಿನ ಸಾರ್ಥಕತೆಗೆ ಆದರ್ಶ ಮಹನೀಯರ ಮಾರ್ಗದಲ್ಲಿ ನಡೆದುಕೊಳ್ಳುವ ಮನೋಭಾವನೆ ಬೆಳೆಸಿಕೊಂಡಾಗ ಮಾತ್ರ ಜೀವನ ಅರ್ಥೈಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಶಿಕ್ಷಕ ಎ.ಉಮೇಶ್ ವಿಶೇಷ ಉಪನ್ಯಾಸ ನೀಡಿದರು. ತಾಲೂಕು ಕಚೇರಿ ಶಿರಸ್ತೇದಾರ್ ಸದಾಶಿವಪ್ಪ, ತಾಪಂ ಇಒ ಎಚ್.ಶಶಿಧರ, ನಗರಸಭಾ ಸದಸ್ಯರಾದ ಕೆ.ವೀರಭದ್ರಯ್ಯ, ಎಂ.ಜೆ.ರಾಘವೇಂದ್ರ, ಕವಿತಾ ಬೋರಯ್ಯ, ತಾಪಂ ಮಾಜಿ ಸದಸ್ಯ ಇ.ಎನ್.ವೆಂಕಟೇಶ್, ಡಾ.ಸಿ.ಶಿವಲಿಂಗಪ್ಪ, ತಾಲೂಕು ಈಡಿಗ ಸಮಾಜದ ಅಧ್ಯಕ್ಷ ಸಿ.ಒ.ರವಿಕುಮಾರ್, ಕಾರ್ಯದರ್ಶಿ ಪ್ರಕಾಶ್, ಪಾಂಡುರಂಗಪ್ಪ, ನೇತಾಜಿ ಪ್ರಸನ್ನ, ಅನ್ವರ್ ಮಾಸ್ಟರ್, ಬಿ.ವಿ.ಸಿರಿಯಪ್ಪ, ರಾಜಣ್ಣ, ಮಂಜುನಾಥ, ರಾಮಸ್ವಾಮಿ, ಬಡಗಿ ಪಾಪಣ್ಣ, ಯಶವಂತಪ್ಪ, ಉಮೇಶ್ ಇತರರಿದ್ದರು.