

ಮಂಡ್ಯ: ಜಿಲ್ಲೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್, ಅಕ್ರಮ ಜೂಜು ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕುವುದು ಅತ್ಯಗತ್ಯ. ಇಲ್ಲದಿದ್ದರೆ ಯುಕರು ತಮ್ಮ ಪೂರ್ವಿಕರ ಆಸ್ತಿಗಳನ್ನು ಮಾರಾಟ ಮಾಡಿ ಬೀದು ಪಾಲಾಗುತ್ತಾರೆ ಎಂದು ಶಾಸಕ ರವಿಕುಮಾರ್ ಗಣಿಗ ಆತಂಕ ವ್ಯಕ್ತಪಡಿಸಿದರು.
ತಾಲೂಕಿನ ಮುತ್ತೇಗೆರೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ತಾಲೂಕಿನ ಬೂದನೂರು, ಹನಕೆರೆ, ತುಂಬುಕೆರೆ, ಕನ್ನಲಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಕ್ರಿಕೆಟ್ ಬೆಟ್ಟಿಂಗ್, ಜೂಜು ದಂಧೆ ಹೆಚ್ಚಾಗಿ ನಡೆಯುತ್ತಿದೆ. ಇತ್ತೀಚೆಗೆ ಬೂದನೂರಿನಲ್ಲಿ ಮೂವರು ಯುವಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೋಟ್ಯಂತರ ರೂ. ಸಾಲ ಮಾಡಿಕೊಂಡವರು ನನ್ನ ಬಳಿ ಬಂದು ಸಹಾಯ ಕೇಳಿದ್ದಾರೆ. ಪರಿಸ್ಥಿತಿ ಹೀಗೇ ಮುಂದುವರಿದಲ್ಲಿ ಭವಿಷ್ಯದಲ್ಲಿ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಕ್ರಿಕೆಟ್ ಬೆಟ್ಟಿಂಗ್ ಹಾಗೂ ಜೂಜಾಟ ದಂಧೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಮಾತ್ರವಲ್ಲದೆ ಇವುಗಳಿಗೆ ತಕ್ಷಣವೇ ಕಡಿವಾಣ ಹಾಕಬೇಕು. ನಾವು ನಿಯೋಜಿಸಿರುವ ಅಧಿಕಾರಿಗಳೇ ಇಂತಹ ದಂಧೆಗೆ ಸಹಕಾರ ನೀಡುತ್ತಿರುವುದು ಕಂಡುಬಂದಲ್ಲಿ ಅವರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.