

ಕೋಲಾರ: ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರವನ್ನು ಕೋರಿದ್ದು, ವಿರೋಧಿಗಳ ಟೀಕೆಗೆ ತಲೆಕೆಡಿಸಿಕೊಳ್ಳದೆ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡುವುದಾಗಿ ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.
ತಾಲೂಕಿನ ವಕ್ಕಲೇರಿ ಹೋಬಳಿ ಚಿಕ್ಕನಹಳ್ಳಿ ಗ್ರಾಮ ಸೇರಿ ವಿವಿಧ ಗ್ರಾಮಗಳಲ್ಲಿ 48 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ನನಗೆ ಕ್ಷೇತ್ರದ ಅಭಿವೃದ್ಧಿ ಮುಖ್ಯ. ವಿರೋಧಿಗಳ ಯಾವುದೇ ಟೀಕೆಗಳಿಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.
ದೇಶ ಪ್ರಗತಿ ಪಥದಲ್ಲಿ ಸಾಗಲು ಗ್ರಾಮಗಳು ಅಭಿವೃದ್ಧಿ ಕಾಣಬೇಕು. ಗ್ರಾಮಗಳಲ್ಲಿ ಪಕ್ಷಾತೀತವಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಮಾಡಬೇಕು, ನಾನು ಒಂದು ಪಕ್ಷದ ಶಾಸಕನಲ್ಲ, ಕ್ಷೇತ್ರದ ಎಲ್ಲ ಜನರ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುತ್ತೇನೆ. ಸರ್ಕಾರದ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಬೇಕು ಎಂದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಆನೇಕ ಯೋಜನೆಗಳಿವೆ. ಅವುಗಳನ್ನು ಬಳಸಿಕೊಂಡು ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಯದ ರೀತಿಯಲ್ಲಿ ಕೆಲಸ ಮಾಡಬೇಕು, ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಕಳಪೆ ಕಂಡು ಬಂದರೆ ಅಂತಹ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ವಕ್ಕಲೇರಿ ರಾಮು, ತಾಪಂ ಸದಸ್ಯ ಪಾಲಾಕ್ಷಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ ದಯಾನಂದ್, ಗ್ರಾಪಂ ಸದಸ್ಯರಾದ ರಾಜಯ್ಯ, ನಂಜುಂಡಗೌಡ, ಎಂಪಿಸಿಎಸ್ ಅಧ್ಯಕ್ಷ ಸಿ.ಅಮರೇಶ್, ಗ್ರಾಮದ ಮುಖಂಡರಾದ ಸಿ.ಎಂ.ಮುನಿಯಪ್ಪ, ಬಿ.ಶ್ರೀನಿವಾಸಪ್ಪ, ಸಿ.ಎಂ ಬೈರಪ್ಪ, ಚಿಕ್ಕಕೃಷ್ಣಪ್ಪ, ಸಿ.ಬಿ ಮಂಜುನಾಥ್, ಗುತ್ತಿಗೆದಾರ ಮಂಜುನಾಥ್, ಇಂಜಿನಿಯರ್ ಶ್ರೀನಿವಾಸ್ ಹಾಜರಿದ್ದರು.