ಎಲ್ಲರಿಗೂ ಶೀಘ್ರವೇ ನೋಟಿಸ್ ಜಾರಿ: ಶಾಸಕ ಎಂ.ಶ್ರೀನಿವಾಸ್ ಮಾಹಿತಿ

19_09_Mdy_10(Basaralu)
Published on
ಮಂಡ್ಯ: ತಾಲೂಕಿನ ಬಸರಾಳು ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಕಳಪೆ ಆಹಾರ ಪದಾರ್ಥದಿಂದ ಬಿಸಿಯೂಟ ಮಾಡಿದ್ದ ಪ್ರಕರಣ ಹಿನ್ನೆಲೆಯಲ್ಲಿ ತಪ್ಪಿತಸ್ಥ ಎಲ್ಲರ ವಿರುದ್ದವೂ ನೋಟಿಸ್ ನೀಡಲಾಗುವುದು ಎಂದು ಶಾಸಕ ಎಂ.ಶ್ರೀನಿವಾಸ್ ಹೇಳಿದರು.
ಗ್ರಾಮದ ಶಾಲೆಯಲ್ಲಿ ಸೋಮವಾರ ಪಾಲಕರೊಂದಿಗೆ ಸಭೆ ನಡೆಸಿ ಹಾಗೂ ಮಕ್ಕಳಿಂದ ಮಾಹಿತಿ ಪಡೆದುಕೊಂಡು ಮಾತನಾಡಿದರು. ಈ ಪ್ರಕರಣದಲ್ಲಿ ತಪ್ಪು ಮಾಡಿರುವ ಬಗ್ಗೆ ಕೂಲಂಕುಷವಾಗಿ ತನಿಖೆ ಮಾಡಲಾಗುವುದು ಎಂದರು. 
ದೂರಿನ ಸುರಿಮಳೆ: ಶಾಲೆಯ ಅವ್ಯವಸ್ಥೆ ಬಗ್ಗೆ ಪಾಲಕರು ಶಾಸಕರ ಬಳಿ ದೂರಿನ ಸುರಿಮಳೆಗೈದರು. ಬಿಸಿಯೂಟದಲ್ಲಿ ಗುಣಮಟ್ಟವಿಲ್ಲ. ಶೌಚಗೃಹದ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿನಿಯರಿಗೆ ಸಮಸ್ಯೆಯಾಗಿದೆ. ಕೊಠಡಿಗಳ ಸಮಸ್ಯೆ ಇದೆ. ರಂಗಮಂದಿರ ಕೆಲಸವೂ ಪೂರ್ಣಗೊಂಡಿಲ್ಲ ಎಂದರು. ಇದಲ್ಲದೆ ಅಡುಗೆ ತಯಾರಕರ ವಿರುದ್ದವೂ ಕ್ರಮ ತೆಗೆದುಕೊಳ್ಳಬೇಕೆಂದು ಕೆಲವರು ಆಗ್ರಹಿಸಿದರು. ಈ ವೇಳೆ ಮನವಿ ಮಾಡಿಕೊಂಡು ಅಡುಗೆ ಸಹಾಯಕರು, ಕಳಪೆ ಪದಾರ್ಥದ ಬಗ್ಗೆ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ. ಈ ವಿಚಾರದಲ್ಲಿ ನಮ್ಮದೇನೂ ತಪ್ಪಿಲ್ಲ. ಈ ಉದ್ಯೋಗದಿಂದಲೇ ಜೀವನ ನಿರ್ವಹಣೆ ಮಾಡುತ್ತಿದ್ದೇವೆ ಎಂದು ಮನವಿ ಮಾಡಿದರು. 
ಸಭೆಯಲ್ಲಿ ತಾಲೂಕು ಪಂಚಾಯಿತಿ ಇಒ ಎಂ.ಎಸ್.ವೀಣಾ, ಉತ್ತರವಲಯ ಬಿಇಒ ಸೌಭಾಗ್ಯ, ಪ್ರಾಂಶುಪಾಲ ಚಂದ್ರಶೇಖರ್, ಅಕ್ಷರ ದಾಸೋಹ ಅಧಿಕಾರಿಗಳಾದ ಮಹೇಶ್, ಗಿರೀಶ್, ಶಿಕ್ಷಣ ಸಂಯೋಜಕರು ಸ್ವಾಮಿ ಸೇರಿದಂತೆ ಎಸ್‌ಡಿಎಂಸಿ ಸದಸ್ಯರು ಹಾಗೂ ಪಾಲಕರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net