ಬಿಎಸ್‌ವೈ ಉತ್ತಮ ಆಡಳಿತ ನೀಡಲಿ : ಶಾಸಕ ಶ್ರೀನಿವಾಸ್ ಆಶಯ

6 Gubbi 1
Published on

ಗುಬ್ಬಿ: ಕೊಟ್ಟ ಮಾತಿಗೆ ತಪ್ಪದೆ 10 ಮಂದಿ ಶಾಸಕರನ್ನು ಸಚಿವರನ್ನಾಗಿ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯಕ್ಕೆ ಉತ್ತಮ ಆಡಳಿತ ನೀಡಲಿ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಆಶಿಸಿದರು.

ಗೋಪಾಲಪುರ ಮಲ್ಲಪ್ಪನಹಳ್ಳಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಲೆಮಾರಿಗಳ ಮೀಸಲಿನ 15 ಲಕ್ಷ ರೂ. ಅನುದಾನದಲ್ಲಿ ಸಿಸಿ ರಸ್ತೆ, ಬಾಕ್ಸ್ ಚರಂಡಿ ನಿರ್ಮಾಣ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಬಿಜೆಪಿಯನ್ನು ಹೊಗಳುವ ಕೆಲಸ ಮಾಡುವುದಿಲ್ಲ. ಯಡಿಯೂರಪ್ಪ ಅವರ ನಡೆ ಮೆಚ್ಚುವಂತಹದ್ದು. ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ ಎಂದು ನೇರವಾಗಿ ಹೇಳಿದ್ದೇನೆ. ಆದರೆ ನಾನು ಪಕ್ಷ ಬಿಟ್ಟು ಬಿಜೆಪಿಯತ್ತ ಹೋಗುತ್ತಿದ್ದೇನೆ ಎಂಬ ವದಂತಿ ಹಬ್ಬಿಸುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಜೆಡಿಎಸ್ ತೊರೆಯುವ ಬಗ್ಗೆ ಎಲ್ಲಿಯೋ ಮಾತನಾಡಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು. ಗುಬ್ಬಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಸವಿಲೇವಾರಿ ಘಟಕದಲ್ಲಿ ಯಂತ್ರೋಪಕರಣ ಅಳವಡಿಸಲು ವೈಜ್ಞಾನಿಕ ನಿರ್ಧಾರ ಕೈಗೊಳ್ಳುವಲ್ಲಿ ವಿಳಂಬವಾಗಿದೆ. ಕಸ ಸಂಸ್ಕರಣೆಗೆ ಯಂತ್ರ ಖರೀದಿಗೆ ಕ್ರಮವಹಿಸಲು ಆಡಳಿತಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಒಂದು ಕೋಟಿ ರೂಪಾಯಿ ಬಳಕೆಯಲ್ಲಿ ಸಕ್ಕಿಂಗ್ ಯಂತ್ರ, ಟ್ಯಾಂಕರ್, ಜೆಸಿಬಿ ಮಾದರಿ ಟ್ರ್ಯಾಕ್ಟರ್ ಮೂಲೆಗೆ ಬಿದ್ದಿವೆ. ಇಂತಹ ವಾಹನ ಖರೀದಿ ಬೇಗ ಮಾಡಲಾಗಿತ್ತು. ಆದರೆ ವಾಹನ ಬಳಕೆ ಮಾಡುವಲ್ಲಿ ವಿಳಂಬವಾಗಿದೆ. ಈ ಬಗ್ಗೆ ಕೂಡ ತನಿಖೆ ನಡೆಸಲಾಗುವುದು. ಕಸ ವಿಲೇವಾರಿ, ಗೊಬ್ಬರ ತಯಾರಿಕೆಗೆ ತಜ್ಞರ ಸಲಹೆ ಪಡೆದು ಘಟಕ ಸ್ವಚ್ಛತೆ ಮಾಡಲಾಗುವುದು. ಯಂತ್ರ ಖರೀದಿ ಮತ್ತು ಬಳಕೆಯ ವಿಳಂಬದ ಬಗ್ಗೆ ಕ್ರಮವಹಿಸಲಾಗುವುದು. ರಾಗಿ ಖರೀದಿ ಕೇಂದ್ರದಲ್ಲಿ ವರ್ತಕರ ಲಾಬಿ ಬಗ್ಗೆ ದೂರು ಬಂದಿದೆ. ಕ್ರಮವಹಿಸಲು ತಿಳಿಸಲಾಗಿದೆ ಎಂದರು. ಮುಖಂಡರಾದ ಪ್ರತಾಪ್, ಬಸವರಾಜು, ಗಂಗಾಧರ್, ರಂಗಸ್ವಾಮಿ, ಶ್ರೀನಿವಾಸ್ ಇದ್ದರು.

ಕೈ ಜತೆಗಿನ ಮೈತ್ರಿ ಬಗ್ಗೆ ಗೊತ್ತಿಲ್ಲ: ಮುಂಬರುವ ವಿಧಾನಪರಿಷತ್ ಚುನಾವಣೆಯಲ್ಲಿ ವರಿಷ್ಠರ ತೀರ್ಮಾನ ಅಂತಿಮವಾಗಿದ್ದು, 10 ಮಂದಿ ಸೂಚಕರೊಂದಿಗೆ ಅಭ್ಯರ್ಥಿಗಳ ಆಯ್ಕೆ ನಡೆಯಬೇಕಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಬಗ್ಗೆ ನನಗೆ ತಿಳಿದಿಲ್ಲ. ಪಕ್ಷವೇ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಜತೆಗೆ ಕೊಟ್ಟ ಮಾತಿನಂತೆ ತುಮಕೂರು ನಗರಪಾಲಿಕೆ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿದ್ದೇವೆ. ನಗರಪಾಲಿಕೆ ವಿಚಾರದಲ್ಲಿ ಬಿಜೆಪಿಯೊಂದಿಗೆ ಎಂದೂ ಮೈತ್ರಿ ಮಾಡಿಕೊಂಡಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಆಡಳಿತ ಸರಾಗವಾಗಿ ನಡೆಯಲು ಸ್ಥಾಯಿ ಸಮಿತಿಯನ್ನು ಬಿಜೆಪಿಗೂ ಬಿಟ್ಟುಕೊಡಲಾಗಿತ್ತು ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದರು.

ತಾಲೂಕಿನ ಚಿರತೆ ಹಾವಳಿಗೆ ಬ್ರೇಕ್ ಹಾಕಲು ಕ್ರಮವಹಿಸಲಾಗಿದೆ. ಅರಣ್ಯ ಇಲಾಖೆ ಅಳವಡಿಸಿದ ಬೋನುಗಳಿಗೆ ಚಿರತೆ ಬೀಳುತ್ತಿಲ್ಲ. ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಚಿರತೆಗಳಿಗೆ ಕಡಿವಾಣ ಹಾಕಲು ಸೂಚಿಸಲಾಗಿದೆ. ಜಂಗಲ್ ತೆರವು ಮಾಡಲು ತಾಲೂಕು ಆಡಳಿತಕ್ಕೆ ತಿಳಿಸಿದ್ದು, ಮೂವರನ್ನು ಬಲಿ ಪಡೆದ ಚಿರತೆ ಸೆರೆಗೆ ಅರಣ್ಯ ಇಲಾಖೆ ಪ್ರಯತ್ನ ಮುಂದುವರಿಸಿದೆ. ಎಸ್.ಆರ್.ಶ್ರೀನಿವಾಸ್ ಶಾಸಕ , ಗುಬ್ಬಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net