ಮೂರು ಪಶು ಚಿಕಿತ್ಸಾಲಯ ಮಂಜೂರು

29-HNL-1
Published on

ವಿಜಯವಾಣಿ ಸುದ್ದಿಜಾಲ ಹಾನಗಲ್ಲ

ತಾಲೂಕಿನಲ್ಲಿ 80 ಹಾಲು ಉತ್ಪಾದಕರ ಸಂಘಗಳಿದ್ದು, ನಿತ್ಯ 20 ಸಾವಿರ ಲೀಟರ್ ಹಾಲು ಉತ್ಪಾದಿಸಲಾಗುತ್ತಿದೆ. ರಾಜ್ಯ ಸರ್ಕಾರ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 5 ರೂ.ನಂತೆ ಒಟ್ಟು ಒಂದು ಲಕ್ಷ ರೂ. ಪ್ರೋತ್ಸಾಹ ಧನ ನೀಡುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ತಾಲೂಕಿನ ಮಾಸನ ಕಟ್ಟಿ ಗ್ರಾಮದಲ್ಲಿ ಶುಕ್ರ ವಾರ ನೂತನ ಪಶು ಚಿಕಿತ್ಸಾಲಯ ಉದ್ಘಾಟಿಸಿ ಅವರು ಮಾತನಾಡಿದರು. ಮಾಸನಕಟ್ಟಿ ಗ್ರಾಮದಲ್ಲಿ ಪಶು ಚಿಕಿತ್ಸಾಲಯ ಆರಂಭಿಸಬೇಕೆನ್ನುವ ಬೇಡಿಕೆ ಹಲವು ದಶಕಗಳಿಂದ ಇತ್ತು. ಅದೀಗ ಈಡೇರಿದೆ. ಪ್ರಸಕ್ತ ವರ್ಷ ತಾಲೂಕಿನಲ್ಲಿ ಹೊಸದಾಗಿ 3 ಪಶು ಚಿಕಿತ್ಸಾಲಯಗಳು ಮಂಜೂರಾಗಿದ್ದು, ಪಶು ಚಿಕಿತ್ಸಾಲಯಗಳಿಗೆ ಸುಸಜ್ಜಿತ ಕಟ್ಟಡ ನಿರ್ಮಿಸಲು ಸಹ ಕಾಳಜಿ ವಹಿಸಲಾಗಿದೆ. ರೈತರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಅನುಗ್ರಹ ಯೋಜನೆಯಡಿ ಆಕಸ್ಮಿಕವಾಗಿ ಮರಣ ಹೊಂದಿದ ಜಾನುವಾರುಗಳ ಮಾಲೀಕರಿಗೆ 15 ಸಾವಿರ ರೂ., ಕುರಿ ಮೇಕೆಗಳ ಮಾಲೀಕರಿಗೆ 7,500 ಪರಿಹಾರ ವಿತರಿಸಲಾಗುತ್ತಿದ್ದು, ಪ್ರಸಕ್ತ ವರ್ಷ ತಾಲೂಕಿನಲ್ಲಿ 5 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ ಎಂದರು.

ಗ್ರಾಮದ ಮುಖಂಡ ರಾಜಶೇಖರಯ್ಯ ಹಿರೇಮಠ ಮಾತನಾಡಿ, ಗ್ರಾಮದಲ್ಲಿ ಪಶು ಚಿಕಿತ್ಸಾಲಯ ಆರಂಭಿಸಬೇಕು ಎನ್ನುವ ಬೇಡಿಕೆ 30-40 ವರ್ಷಗಳಿಂದ ಇತ್ತು. ಅದೀಗ ಈಡೇರುತ್ತಿರುವುದು ಈ ಭಾಗದ ಗ್ರಾಮಸ್ಥರಲ್ಲಿ ಹರ್ಷ ತಂದಿದೆ. ಶಾಸಕ ಶ್ರೀನಿವಾಸ ಮಾನೆ ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಸಹ ಬಿಡುಗಡೆ ಮಾಡಿದ್ದಾರೆ ಎಂದರು.

ಗ್ರಾಪಂ ಅಧ್ಯಕ್ಷ ಗಂಗಪ್ಪ ಹಿರಗಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಬಗರ್‌ಹುಕುಂ ಸಮಿತಿ ಅಧ್ಯಕ್ಷ ಪುಟ್ಟಪ್ಪ ನರೇಗಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮರಗಡಿ, ಪ್ರಮುಖರಾದ ಮಲ್ಲಿಕಾರ್ಜುನ ಬಿಜಾಪುರ, ಗುಡ್ಡನಗೌಡ ಹೊಸಗೌಡ್ರ, ಗಂಗನಗೌಡ ಪಾಟೀಲ, ಸಂಕಪ್ಪ ಸಂಕಣ್ಣನವರ, ಚನ್ನಬಸಪ್ಪ ಬೆಂಡಿಗೇರಿ, ಯಲ್ಲಪ್ಪ ಹಿರಗಪ್ಪನವರ, ಕರಿಯಪ್ಪ ಗುಡ್ಡದ, ಹನುಮಂತಪ್ಪ ತಿಮ್ಮಾಪುರ, ಜಗದೀಶ ಹರಿಜನ, ಮಂಜಪ್ಪ ತಿಮ್ಮಾಪುರ, ಕೊಟ್ರಮ್ಮ ಚಿಕ್ಕಮಠ, ಜಯಮ್ಮ ಮಳೆಣ್ಣನವರ, ಅಲ್ತಾಹಿರ್ ಕಚವಿ, ಸಿದ್ದು ಓಣಿಕೇರಿ, ರಾಮು ಭಜಂತ್ರಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಶುರಾಮ ಪೂಜಾರ, ಪಶು ವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ. ಗಿರೀಶ ರೆಡ್ಡೇರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net