

ತುಮಕೂರು: ಭ್ರಷ್ಟಾಚಾರದಲ್ಲಿ ತೊಡಗುವವರು ಬಿಜೆಪಿ ಸರ್ಕಾರದಲ್ಲಿ ಯಾರೂ ಇಲ್ಲ, ಇದ್ದರೆ ಅದು ಕಾಂಗ್ರೆಸ್‌ನಲ್ಲಿ ಮಾತ್ರ ಎಂದು ವಸತಿ ಸಚಿವ ವಿ.ಸೋಮಣ್ಣ ವಿರೋಧ ಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದರು.
ಸಿದ್ಧಗಂಗಾ ಮಠಕ್ಕೆ ಮಂಗಳವಾರ ಭೇಟಿ ನೀಡಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಕಾರಣಕ್ಕೆ ಟೀಕೆ ಮಾಡುತ್ತಿದ್ದಾರೆ. ಸಾಕ್ಷೃವಿದ್ದರೆ ತೋರಿಸಲಿ ಎಂದು ಸವಾಲೆಸೆದರು.
ಕರೊನಾ ಮಹಾಮಾರಿ ಹೆಚ್ಚಾಗಿರುವ ನನಗೆ ಬೆಂಗಳೂರಿನ ಸೂಕ್ಷ್ಮ ಪ್ರದೇಶಗಳಾದ ಶಿವಾಜಿ ನಗರ, ಸುಭಾಷ್ ನಗರ, ಸಿ.ವಿ.ರಾಮನ್ ನಗರ, ಹೆಬ್ಬಾಳ, ಗೋವಿಂದರಾಜ ನಗರ ಸೇರಿ 53 ವಾರ್ಡ್‌ಗಳ ಜವಾಬ್ದಾರಿ ನೀಡಲಾಗಿದೆ. ಅದನ್ನು ಯಶಸ್ವಿಯಾಗಿ ನಿಭಾಯಿಸುತ್ತೇನೆ ಎಂಬ ವಿಶ್ವಾಸ ಇದೆ ಎಂದರು.
ಬೆಂಗಳೂರಿನಲ್ಲಿ 1.35 ಕೋಟಿ ಜನರು ವಾಸವಿದ್ದು, ಹೊರಗಿನವರೇ 30 ಲಕ್ಷ ಜನರಿದ್ದಾರೆ. ಅವರೆಲ್ಲರ ಜೀವ ಸರ್ಕಾರಕ್ಕೆ ಮುಖ್ಯ. ಕರೊನಾ ಮಹಾಮಾರಿ ನಿಯಂತ್ರಣಕ್ಕೆ ಶಕ್ತಿಮೀರಿ ಶ್ರಮಿಸಲಾಗುತ್ತಿದೆ ಎಂದು ವಿವರಿಸಿದರು.
ವಸತಿ ಯೋಜನೆಗೆ 20 ಸಾವಿರ ಕೋಟಿ ರೂ. ನೀಡಲಾಗಿದೆ, 5. 40 ಲಕ್ಷ ಮನೆಗಳಿಗೆ ಮಂಜೂರಾತಿ ನೀಡಲಾಗಿದೆ, ಇದಕ್ಕೆ 6 ಸಾವಿರ ಕೋಟಿ ರೂ. ಬೇಕಾಗುತ್ತದೆ, ಫಲಾನುಭವಿಗಳಿಗೆ 1200 ಕೋಟಿ ರೂ. ನೀಡಲಾಗಿದೆ ಎಂದರು. ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಎಸ್.ಶಿವಣ್ಣ ಮತ್ತಿತರರು ಇದ್ದರು.
ಖಾಲಿ ಇದ್ದಾಗ ನೋಡೋಣ! : ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಮೇಲೆ ವಿ.ಸೋಮಣ್ಣ ಕಣ್ಣಿಟ್ಟಿದ್ದಾರೆ ಎಂಬ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಲು ಸಚಿವ ಸೋಮಣ್ಣ ನಿರಾಕರಿಸಿದರು. ಸದ್ಯಕ್ಕೆ ಆ ಜಾಗ ಖಾಲಿ ಇಲ್ಲ, ಇದ್ದಾಗ ಬಂದರೂ ಬರಬಹುದು ಎಂದು ಮಾರ್ಮಿಕವಾಗಿ ಹೇಳಿದರು. ಸಚಿವ ಜೆ.ಸಿ.ಮಾಧುಸ್ವಾಮಿ ಜತೆಗಿನ ವೈಮನಸ್ಸಿನ ಬಗ್ಗೆ ಕೇಳಲಾದ ಪ್ರಶ್ನೆಗೂ ಉತ್ತರಿಸದೇ ಮುಂದೆ ಸಾಗಿದರು.