ವಸ್ತುನಿಷ್ಠ ವರದಿ ಪ್ರಕಟಿಸಿ

MLA, Siddu Savadi, Press Day, Mahalingpur,
ಮಹಾಲಿಂಗಪುರದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಿಗೆ ಪತ್ರಿಕಾ ಮಿತ್ರ ಪ್ರಶಸ್ತಿ ನೀಡಲಾಯಿತು. ಸಹಜಾನಂದ ಸ್ವಾಮಿಗಳು, ಮಹೇಶ ಆರಿ, ಆನಂದ ದಲಭಂಜನ, ಮಹೇಶ ಅಂಗಡಿ ಇದ್ದರು.
Published on

ಮಹಾಲಿಂಗಪುರ: ದೇಶದ ಅಭಿವೃದ್ಧಿಯಲ್ಲಿ ಪತ್ರಿಕಾರಂಗದ ಪಾತ್ರ ಮಹತ್ವದ್ದಾಗಿದ್ದು, ಸಮಾಜದಲ್ಲಿ ಸ್ವಾಸ್ಥೃ ಕಾಪಾಡುತ್ತ ದೇಶದ ಅಭಿವೃದ್ಧಿಯಲ್ಲಿ ತಮ್ಮದೇ ಆದ ಕಾಣಿಕೆ ನೀಡುತ್ತಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.

ಸ್ಥಳೀಯ ಶ್ರೀ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಬುಧವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಹಾಲಿಂಗಪುರ ಘಟಕ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಡವರ, ದೀನ ದಲಿತರ ಧ್ವನಿಯಾಗಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಸಮಾಜ ಘಾತಕ ಶಕ್ತಿಗಳು ಹೆದರುತ್ತವೆ. ಯುದ್ಧರಂಗದಲ್ಲೂ ಧುಮುಕಿ ಪತ್ರಕರ್ತರು ವರದಿ ಮಾಡುತ್ತಾರೆ. ನಿರ್ಭಿಡೆಯಿಂದ ವಸ್ತುನಿಷ್ಠ ವರದಿ ಮಾಡಿ, ಯಾರನ್ನೋ ಟಾರ್ಗೆಟ್ ಮಾಡಿ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಬೇಡಿ ಎಂದರು.

ಕಾನಿಪ ಸಂಘದ ಜಿಲ್ಲಾಧ್ಯಕ್ಷ ಆನಂದ ದಲಭಂಜನ ಮಾತನಾಡಿ, ಸಾಮಾಜಿಕ ಜಾಲತಾಣದಿಂದ ಪತ್ರಿಕೆ ಪ್ರಸರಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಮೊಬೈಲ್ ಸದುಪಯೋಗಕ್ಕಿಂತ ದುರುಪಯೋಗ ಹೆಚ್ಚಾಗುತ್ತಿದ್ದು, ಮಕ್ಕಳ ಕೈಗೆ ಪತ್ರಿಕೆ ನೀಡಿ ಓದುವ ಹವ್ಯಾಸ ಬೆಳೆಸಿರಿ ಎಂದರು.

ಅಲ್ಲದೆ, ಮಹಾಲಿಂಗಪುರ ಪತ್ರಿಕಾ ಭವನ ನಿರ್ಮಾಣಕ್ಕೆ ಶಾಸಕ ಸಿದ್ದು ಸವದಿ ಅವರು 10 ಲಕ್ಷ ರೂ. ಅನುದಾನ ನೀಡಿದ್ದು, ಇನ್ನೂ 10 ಲಕ್ಷ ರೂ. ಮಂಜೂರು ಮಾಡಬೇಕೆಂದು ಮನವಿ ಮಾಡಿದರು. ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಪತ್ರಕರ್ತ ಜಯರಾಮ ಶೆಟ್ಟಿ ಮಾತನಾಡಿದರು.

ಹಿರಿಯ ಪತ್ರಕರ್ತರಾದ ವಿಶ್ವ ಕಾಡದೇವರ, ಡಾ.ಟಿ.ಪಿ. ಗಿರಡ್ಡಿ, ವೆಂಕಟೇಶ ಗುಡೆಪ್ಪನವರ, ಶ್ರೀನಿವಾಸ ಬಬಲಾದಿ, ಇಲಾಹಿ ಜಮಖಂಡಿ ಅವರಿಗೆ ಪತ್ರಿಕಾ ಮಿತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪತ್ರಕರ್ತರ ಪ್ರತಿಭಾವಂತ ಮಕ್ಕಳಾದ ಸಚಿನ್ ಅನುಪಸ್ಥಿತಿಯಲ್ಲಿ ಅವರ ತಂದೆ ಶಿವರಾಯ ಈಶ್ವರಪ್ಪಗೋಳ, ಶ್ರುತಿ ಅನುಪಸ್ಥಿತಿಯಲ್ಲಿ ಜಯರಾಮ ಶೆಟ್ಟಿ, ಬಿಂದು ಮನ್ನಯ್ಯನವರಮಠ, ಹರ್ಷಿತಾ ಉತ್ತಂಗಿ ಹಾಗೂ ಹರ್ಬೇಜಖಾನ ಅನುಪಸ್ಥಿತಿಯಲ್ಲಿ ಅವರ ತಂದೆ ಇಲಾಹಿ ಜಮಖಂಡಿ ಅವರನ್ನು ಸನ್ಮಾನಿಸಲಾಯಿತು.

ಶ್ರೀ ಸಿದ್ಧಾರೂಢ ಮಠದ ಸಹಜಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಕಾನಿಪ ಸಂಘದ ಮಹಾಲಿಂಗಪುರ ಘಟಕ ಅಧ್ಯಕ್ಷ ಮಹೇಶ ಆರಿ ಅಧ್ಯಕ್ಷತೆ ವಹಿಸಿದ್ದರು. ಗೋದಾವರಿ ಬಯೋರಿಫೈನರೀಜ್ ಅಧಿಕಾರಿ ವಿಜಯಕುಮಾರ ಕಣವಿ, ರಾಜ್ಯ ಕಾನಿಪ ಸಂಘದ ಸದಸ್ಯ ಮಹೇಶ ಅಂಗಡಿ, ಜಿಲ್ಲಾ ಕಾರ್ಯದರ್ಶಿ ಶಂಕರ ಕಲ್ಯಾಣಿ, ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ, ಕಾರ್ಯದರ್ಶಿ ಮೀರಾ ತಟಗಾರ, ಕಾನೂನು ಸಲಹೆಗಾರ ಮಲ್ಲು ಸಂಗಣ್ಣವರ, ಸಂಘದ ಗೌರವಾಧ್ಯಕ್ಷ ಎಂ.ಐ. ಡಾಂಗೆ, ಜಿಲ್ಲಾ ಕಾನಿಪ ಸಂಘದ ಸದಸ್ಯ ಎಸ್.ಎಸ್. ಈಶ್ವರಪ್ಪಗೋಳ, ಪತ್ರಕರ್ತರಾದ ಮಹೇಶ ಮನ್ನಯ್ಯನವರಮಠ, ಶಿವಲಿಂಗ ಸಿದ್ನಾಳ, ಚಂದ್ರಶೇಖರ ಮೋರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net