ವಾರಿಸಾ ಮಾಡಿಸದಿದ್ದರೆ ದೊರಕದು ಸೌಲಭ್ಯ, ಜನಸ್ಪಂದನ ಸಭೆಯಲ್ಲಿ ಶಾಸಕ ಶಿವರಾಮ ಹೆಬ್ಬಾರ ಹೇಳಿಕೆ

31mnd1 photo
Published on

ಮುಂಡಗೋಡ: ತಂದೆ-ತಾಯಿಗಳ ಹೆಸರಿನಲ್ಲಿರುವ ಜಮೀನುಗಳನ್ನು ಅವರ ಮರಣಾನಂತರ ವಾರಿಸಾ ಮಾಡಿಸಿಕೊಳ್ಳ ದ 600ಕ್ಕೂ ಅಧಿಕ ಪ್ರಕರಣಗಳು ತಾಲೂಕಿನಲ್ಲಿವೆ. ಇಂತಹ ರೈತರಿಗೆ ಬೆಳೆವಿಮೆ, ಬೆಳೆ ಪರಿಹಾರ, ಸರ್ಕಾರದ ಯಾವುದೇ ಸೌಲಭ್ಯ ಸಿಗುವುದಿಲ್ಲ ಹಾಗಾಗಿ ರೈತರು ಕೂಡಲೆ ವಾರಿಸಾ ಮಾಡಿಸಿಕೊಳ್ಳುವ ಕೆಲಸಕ್ಕೆ ಮುಂದಾಗಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿ ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲು ಯತ್ನಿಸುವ ಉದ್ದೇಶದಿಂದ ಸರ್ಕಾರ ಜನಸ್ಪಂದನ ಕಾರ್ಯಕ್ರಮ ಆಯೋಜಿಸಿದೆ. ಅಧಿಕಾರಿಗಳು ಜನಸಾಮಾನ್ಯರಿಂದ ಅಂತರ ಕಾಯ್ದುಕೊಂಡರೆ ಇಂಥಹ ಕಾರ್ಯಕ್ರಮಗಳು ಅನಿವಾರ್ಯವಾಗುತ್ತವೆ ಎಂದು ಅಧಿಕಾರಿಗಳಿಗೆ ಹೆಬ್ಬಾರ ಕುಟುಕಿದರು.

ನಿರೀಕ್ಷೆ ಮೀರಿ ಮಳೆಯಾಗಿ ಮನೆಗಳಿಗೆ, ತೋಟಗಾರಿಕಾ ಬೆಳೆ ಹಾನಿ ಸಂಭವಿಸಿದೆ. ಜನರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವ ಅಗತ್ಯವಿದೆ. ಕಾರ್ಯಕ್ರಮ ಕಾಟಾಚಾರಕ್ಕೆ ಆಗಬಾರದು. ಜನರ ಕೆಲಸಗಳು ತ್ವರಿತ ಗತಿಯಲ್ಲಿ ಆಗಬೇಕು ಎಂದರು.

ಯಾವ-ಯಾವ ಇಲಾಖೆಗಳಿಗೆ ಅರ್ಜಿ ಕಳುಹಿಸಲಾಗುತ್ತದೆಯೋ. ಹತ್ತು ದಿನಗಳಲ್ಲಿ ಬಗೆ ಹರಿಸಿ ತಹಸಿಲ್ದಾರ್​ಗೆ ವರದಿ ಸಲ್ಲಿಸಬೇಕು. ಅಧಿಕಾರಿಗಳು ತಮ್ಮ ಕಾರ್ಯನಿರ್ವಹಿಸುವಾಗ ಸಮರ್ಪಕವಾಗಿ ಯೋಚಿಸಿ ಬಡವರಿಗೆ ತೊಂದರೆ ಕೊಡದಂತೆ ಕೆಲಸ ಮಾಡಬೇಕು ಎಂದರು. ಸಭೆಯಲ್ಲಿ ಒಟ್ಟು 138ಅರ್ಜಿಗಳು ಸಲ್ಲಿಕೆಯಾದವು.

ತಹಸೀಲ್ದಾರ್ ಶಂಕರ ಗೌಡಿ, ತಾಪಂ ಅಧಿಕಾರಿ ಟಿ.ವೈ. ದಾಸನಕೊಪ್ಪ, ಎಸಿಎಫ್ ರವಿ ಹುಲಕೋಟಿ, ಮುಖ್ಯಾಧಿಕಾರಿ ಚಂದ್ರಶೇಖರ್ ಬಿ., ಕೃಷಿ ಆಧಿಕಾರಿ ಎಂ.ಎಸ್. ಕುಲಕರ್ಣಿ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಮಹದೇವಪ್ಪ ಹ್ಯಾಟಿ, ತೋಟಗಾರಿಕಾ ಆಧಿಕಾರಿ ಕೃಷ್ಣ ಕೊಲೊರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರೂಪಾ ಅಂಗಡಿ, ಪಂಚಾಯತ್ ರಾಜ್ ಇಲಾಖೆಯ ಪ್ರದೀಪ ಭಟ್, ಪಟ್ಟಣ ಪಂಚಾಯಿತಿ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net