ಬಿಎಲ್‌ಡಿಇಯಿಂದ ಶಾಸಕ ಶಾಮನೂರ ಶಿವಶಂಕರಪ್ಪಗೆ ಗೌರವ ಡಾಕ್ಟರೇಟ್ ಪ್ರದಾನ

SHAMANUR SHIVASHANKARAPPA
ವಿಜಯಪುರದ ಬಿಎಲ್‌ಡಿಇ ಡೀಮ್ಡ್ ವಿವಿಯಲ್ಲಿ ಹಮ್ಮಿಕೊಂಡಿದ್ದ 11ನೇ ಘಟಿಕೋತ್ಸವದಲ್ಲಿ ಶಾಸಕ ಶಾಮನೂರ ಶಿವಶಂಕರಪ್ಪಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಕುಲಾಧಿಪತಿ ಎಂ.ಬಿ. ಪಾಟೀಲ, ಸಚಿವ ಶರಣಪ್ರಕಾಶ ಪಾಟೀಲ, ಸಮಕುಲಾಧಿಪತಿ ಡಾ. ವೈ.ಎಂ. ಜಯರಾಜ ಮತ್ತಿತರರಿದ್ದಾರೆ.
Published on

ವಿಜಯಪುರ: ಮಾಜಿ ಸಚಿವ, ಶಾಸಕ ಶಾಮನೂರ ಶಿವಶಂಕರಪ್ಪಗೆ ಬಿಎಲ್‌ಡಿಇ ಡೀಮ್ಡ್ ವಿಶ್ವ ವಿದ್ಯಾಲಯದಿಂದ 11ನೇ ಘಟಿಕೋತ್ಸವದಂಗವಾಗಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಶುಕ್ರವಾರ ಬಿಎಲ್‌ಡಿಇ ಡೀಮ್ಡ್ ವಿವಿಯಲ್ಲಿ ನಡೆದ ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸಿದ ಶಾಮನೂರ ಅವರು, ಈಗಾಗಲೇ ನನಗೆ ಮೂರು ವಿಶ್ವ ವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ದೊರಕಿದ್ದು, ಇದು ನಾಲ್ಕನೇ ಗೌರವವಾಗಿದೆ. ಇದಕ್ಕೆಲ್ಲ ನಾವು ಮಾಡುವ ಒಳ್ಳೆಯ ಕೆಲಸಗಳೇ ಕಾರಣ. ನಾನು ಏಳು ಬಾರಿ ಶಾಸಕನಾಗಿದ್ದೇನೆ. ಒಂದು ಬಾರಿ ಸಂಸದನಾಗಿ ಸೇವೆ ಸಲ್ಲಿಸಿದ್ದೇನೆ. ನನ್ನ ನಿಷ್ಠೆ ಪರಿಗಣಿಸಿ ಪಕ್ಷ ಪ್ರತಿ ಬಾರಿ ನನಗೆ ಅವಕಾಶ ನೀಡಿದೆ ಎಂದರು.

ವಿಶ್ವಾಸದಿಂದ ಜನಸೇವೆ ಮಾಡಿದರೆ ಎಲ್ಲರು ನಮ್ಮ ಕಾಯಕವನ್ನು ಗುರುತಿಸಿ ಗೌರವಿಸುತ್ತಾರೆ. ಈಗ ಪದವಿ ಪಡೆದಿರುವ ವೈದ್ಯರು ತಾವು ಮಾಡುವ ದುಡಿಮೆಯಲ್ಲಿ ಹತ್ತು ಪೈಸೆಯಷ್ಟಾದರೂ ದಾನ ದರ್ಮದ ಸೇವೆಗೆ ನೀಡಬೇಕು ಎಂದು ಕಿವಿಮಾತು ಹೇಳಿದರು.

ಈ ಹಿಂದೆ ಎಸ್. ನಿಜಲಿಂಗಪ್ಪನವರು ಅಧಿಕಾರದಲ್ಲಿದ್ದಾಗ ಬೆಳಗಾವಿ, ಕಲಬುರಗಿ, ದಾವಣಗೆರೆಗಳಿಗೆ ಮೇಡಿಕಲ್ ಕಾಲೇಜುಗಳನ್ನು ನೀಡಿದ್ದರು. ನಂತರ ವಿಜಯಪುರದಲ್ಲಿ ಬಿಎಲ್ಡಿಇ ಮತ್ತು ಬಾಗಲಕೋಟೆಯಲ್ಲಿ ಬಿವಿವಿಎಸ್ ವೈದ್ಯಕೀಯ ಕಾಲೇಜುಗಳು ಆರಂಭವಾಗಿವೆ. ಹೆಚ್ಚೆಚ್ಚು ಕಾಲೇಜುಗಳು ಪ್ರಾರಂಭವಾದರೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗುತ್ತದೆ. ಈಗ ದೇಶ ಮತ್ತು ವಿದೇಶಗಳಲ್ಲಿ ಎಲ್ಲಿಯೇ ಹೋದರು ಇಲ್ಲಿನ ವೈದ್ಯರು ಸಿಗುತ್ತಾರೆ. ಇದು ಹೆಮ್ಮೆಯ ವಿಷಯ ಎಂದು ಅವರು ಹೇಳಿದರು.

ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ ಅಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಕುಲಾಧಿಪತಿ ಎಂ.ಬಿ. ಪಾಟೀಲ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಸಮಕುಲಾಧಿಪತಿ ಡಾ. ವೈ.ಎಂ. ಜಯರಾಜ, ಕುಲಪತಿ ಡಾ.ಆರ್.ಎಸ್. ಮುಧೋಳ, ಸಮಕುಲಪತಿ ಡಾ. ಅರುಣ ಚಂ. ಇನಾಮದಾರ, ಪ್ರಾಚಾರ್ಯ ಪ್ರೊ. ಅರವಿಂದ ಪಾಟೀಲ, ರಜಿಸ್ಟ್ರಾರ ಪ್ರೊ.ಆರ್.ವಿ. ಕುಲಕರ್ಣಿ, ವಿದ್ಯಾಧಿಕಾರಿ ಡಾ.ಎಸ್.ವಿ. ಪಾಟೀಲ, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಎಸ್.ಎಸ್. ದೇವರಮನಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net