

ಹಳಿಯಾಳ: ಕಳೆದ ವರ್ಷ ಕಬ್ಬು ಬೆಳೆಗಾರ ರೈತ ಸಂಘಟನೆಯ ಮುಖಂಡರು ಅನಾವಶ್ಯಕ ಪ್ರತಿಭಟನೆ ಮಾಡಿ ರೈತರಿಗೆ ತೊಂದರೆ ಮಾಡಿದ್ದಾರೆ. ಈ ಬಾರಿಯೂ ಕಾರ್ಖಾನೆ ಬಂದ್ ಮಾಡಲು ಪ್ರಯತ್ನಿಸಿದರೇ ರೈತರಿಗೆ ಹಾನಿ ಆಗಲಿದೆ ಎಂಬುದನ್ನು ರೈತರು ಅರಿತುಕೊಳ್ಳಬೇಕೆಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಅವರು ಪಟ್ಟಣದ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಹಳಿಯಾಳದ ಹುಲ್ಲಟ್ಟಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಎಲ್ಲರ ಸಹಕಾರದಿಂದ ಸ್ಥಾಪನೆ ಆಗಿದ್ದು, ಈ ಭಾಗದ ರೈತರಿಗೆ ಕಾಮಧೇನುವಾಗಿದೆ.
ಇಐಡಿ ಕಾರ್ಖಾನೆಯು ರೈತರಿಗೆ ಕಬ್ಬು ಸಂದಾಯ ಮಾಡಿದ 15 ದಿನಗಳಲ್ಲೇ ಸಂಪೂರ್ಣ ಹಣ ಪಾವತಿ ಮಾಡುವ ಉತ್ತಮ ಕಾರ್ಖಾನೆಯಾಗಿದೆ. ರಾಜ್ಯದ ಇತರೇ ಕಾರ್ಖಾನೆಗಳು ವರ್ಷಗಳೇ ಕಳೆದರು ಹಣ ಪಾವತಿಸದೇ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತೆ ಮಾಡುತ್ತಾರೆ. ಅಲ್ಲದೇ ಕಳೆದ ವರ್ಷ ಹಳಿಯಾಳ ಭಾಗದ ರೈತರು ಬೇರೆ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸಿದ್ದು ಅವರಿಗೂ ಈವರೆಗೆ ಸಂಪೂರ್ಣ ಹಣ ಪಾವತಿಯಾಗಿಲ್ಲ ಇದರಿಂದ ಆ ರೈತರು ಸಂಕಷ್ಟಕ್ಕೆ ಸಿಲುಕಿದ ಬಗ್ಗೆ ತಿಳಿದು ಬೇಸರವಾಗುತ್ತಿದೆ ಎಂದರು.
ಹಳಿಯಾಳ ಸಕ್ಕರೆ ಕಾರ್ಖಾನೆಗೆ ಹಳಿಯಾಳ, ದಾಂಡೇಲಿ, ಧಾರವಾಡ,ಜೋಯಿಡಾ, ಕಲಘಟಗಿ, ಮುಂಡಗೋಡ, ಅಳ್ನಾವರ ಮೀಸಲು ಕ್ಷೇತ್ರವಾಗಿದ್ದು ಈ ಭಾಗದ ರೈತರು ಇದೇ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸಬೇಕು ಎಂದು ಕರೆ ನೀಡಿದ ಶಾಸಕರು ಈ ಬಾರಿ ಹಳಿಯಾಳದಲ್ಲಿ ರಾಜ್ಯದ ವಿವಿಧ ಭಾಗಗಳ 20 ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಯವರು ಹಳಿಯಾಳ ಕ್ಷೇತ್ರದಲ್ಲಿ ಕಚೇರಿ ತೆರೆದು ಹಳಿಯಾಳದ ಕಬ್ಬು ತೆಗೆದುಕೊಂಡು ಹೋಗುವ ಯೋಚನೆಯಲ್ಲಿದ್ದ ಬಗ್ಗೆ ಮಾಹಿತಿ ದೊರಕಿದ್ದು, ಇದು ಕಾನೂನು ಬಾಹಿರ ಪ್ರಕ್ರಿಯೇಯಾಗಿದೆ ಕಾರಣ ಈ ಬಗ್ಗೆ ತಹಸೀಲ್ದಾರ್ ಅವರಿಗೆ ಈ ಎಲ್ಲ ಕಚೇರಿಗಳನ್ನು ಮುಚ್ಚಿಸಲು ಸೂಚನೆ ನೀಡಿರುವುದಾಗಿ ತಿಳಿಸಿದರು.
ಮಳೆ ಅಭಾವದಿಂದ ಜಮೀನುಗಳಲ್ಲಿ ನೀರಿನ ತೀವೃ ಕೊರತೆಯಿಂದ ಭತ್ತ, ಕಬ್ಬು, ಗೋವಿನ ಜೋಳ ಬಹುತೇಕ ಎಲ್ಲ ಬೆಳೆಗಳು ಹಾನಿಗೊಳಗಾಗಿವೆ. ಕಬ್ಬಿಗೆ ನೀರಿನ ಪ್ರಮಾಣ ತೀರಾ ಕಡಿಮೆ ಆಗಿರುವುದರಿಂದ ಕಬ್ಬು ಒಣಗುತ್ತಿದೆ ಮಾತ್ರವಲ್ಲದೇ ಇಳುವರಿಯೂ ಸಾಕಷ್ಟು ಕುಂಠಿತವಾಗಿರುವುದರಿಂದ ಉಳಿದ ಕಬ್ಬು ಆದಷ್ಟು ಬೇಗ ಕಾರ್ಖಾನೆಗೆ ಹೊಗದೆ ಇದ್ದರೇ ರೈತರು ಮತ್ತೇ ಸಮಸ್ಯೆಗೆ ಸಿಲುಕಲಿದ್ದಾರೆ. ಕಾರಣ ರೈತರ ಯಾವುದೇ ಸಮಸ್ಯೆಗಳಿದ್ದರು ರೈತ ಸಂಘಟನೆಯ ಮುಖಂಡರು ಮಾತುಕತೆ , ಚರ್ಚೆಯ ಮೂಲಕ ಸಮಸ್ಯೆಗೆ ಪರಿಹಾರ ಕಂಡಕೊಳ್ಳಲಿ. ನಾನು ಯಾವ ಸಮಯದಲ್ಲಾದರೂ ರೈತರ ಸಮಸ್ಯೆಗೆ ಸಹಕಾರ ನೀಡಲು ಸಿದ್ದ ಎಂದು ದೇಶಪಾಂಡೆ ಸ್ಪಷ್ಟಪಡಿಸಿದರು.
ರೈತರು ತಾಳ್ಮೆ ಇಟ್ಟುಕೊಳ್ಳಿ, ನಿಮ್ಮ ನಿಮ್ಮಲ್ಲೇ ಕಬ್ಬು ಸಾಗಿಸಲು ಪೈಪೋಟಿ ಮಾಡಬೇಡಿ, ಕಬ್ಬು ಕಟಾವು ತಾಂಡಾಗಳಿಗೆ ಯಾವುದೇ ಕಾರಣಕ್ಕೂ ಲಗಾನಿ ಕೊಡಬೇಡಿ ಎಂದು ಕರೆ ನೀಡಿದರು. ಬರಗಾಲ ಪಿಡಿತ ಹಳಿಯಾಳ ಕ್ಷೇತ್ರದಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ದೇಶಪಾಂಡೆ ತಿಳಿಸಿದರು.