

ಕೋಲಾರ: ಕೆಜಿಎಫ್ ನಗರಸಭೆಯಲ್ಲಿ ಕಾಂಗ್ರೆಸ್ ನೇತೃತ್ವದ ಆಡಳಿತಕ್ಕೆ ವೇದಿಕೆ ಸಜ್ಜುಗೊಳಿಸಲು ಶಾಸಕಿ ಎಂ.ರೂಪಕಲಾ ಅವರು ಕೋಲಾರ-ಮುಳಬಾಗಿಲು ರಸ್ತೆಯ ಖಾಸಗಿ ರೆಸಾರ್ಟ್‌ನಲ್ಲಿ ಭಾನುವಾರ ಕರೆದಿದ್ದ ಸಭೆಗೆ 26 ಮಂದಿ ಸದಸ್ಯರು ಹಾಜರಾಗುವ ಮೂಲಕ ಬಿಜೆಪಿಗೆ ಶಾಕ್ ನೀಡಿದ್ದಾರೆ.
ಕೆಜಿಎಫ್ ನಗರಸಭೆಗೆ ಕಾಂಗ್ರೆಸ್ಸಿನಿಂದ 13, ಬಿಜೆಪಿಯಿಂದ 3 ಸೇರಿ ಒಟ್ಟು 35 ಜನ ಆಯ್ಕೆಯಾಗಿದ್ದು 11 ಮಂದಿ ಪಕ್ಷೇತರರು ಕೈ ಹಿಡಿಯಲು ಒಲವು ತೋರಿರುವುದರಿಂದ ಶಾಸಕಿ ರೂಪಕಲಾ ತಂಡವನ್ನು ಯಾರೂ ಹೈಜಾಕ್ ಮಾಡದಂತೆ ಎಚ್ಚರವಹಿಸಿದ್ದಾರಲ್ಲದೆ, ಒಗ್ಗಟ್ಟು ಕಾಯ್ದುಕೊಳ್ಳುವ ಸಲುವಾಗಿ ರೆಸಾರ್ಟ್‌ನಲ್ಲಿ ನೀತಿ ಬೋಧನೆ ಮಾಡಿರುವುದು ಬಿಜೆಪಿ ಮುಖಂಡರನ್ನು ಪೇಚಿಗೆ ಸಿಲುಕಿಸಿದೆ.
ತಮ್ಮ ಕರೆ ಮೇರೆಗೆ ಸಭೆಯಲ್ಲಿ ಹಾಜರಾಗಿದ್ದ 26 ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಶಾಸಕಿ, ಚುನಾವಣೆ ನಡೆಯುವವರೆಗೂ ಎಲ್ಲ 26 ಸದಸ್ಯರು ಒಟ್ಟಾಗಿರಬೇಕು, ವಿರೋಧಿಗಳು ಒಡ್ಡುವ ಆಮಿಷಗಳಿಗೆ ಬಲಿಯಾಗಬಾರದು, ಕೆಜಿಎಫ್ ಅನ್ನು ರಾಜ್ಯದಲ್ಲೇ ಮಾದರಿ ನಗರವನ್ನಾಗಿಸಲು ಕೈಜೋಡಿಸಬೇಕು ಎಂದು ಮನವಿ ಮಾಡಿ ಸದಸ್ಯರನ್ನು ತೆಕ್ಕೆಯಿಂದ ತಪ್ಪಿಸಿಕೊಳ್ಳದಂತೆ ರಣತಂತ್ರ ರೂಪಿಸಿದ್ದಾರೆ.
ಪಕ್ಷೇತರ ಸದಸ್ಯರು ನಗರ ಅಭಿವೃದ್ಧಿ ಗುರಿಯಾಗಿಟ್ಟುಕೊಂಡು ಕಾಂಗ್ರೆಸ್ ಬೆಂಬಲಿಸಿ, ನಿಮ್ಮ ವಾರ್ಡ್ ಅಭಿವೃದ್ಧಿ ಹಾಗೂ ವೈಯಕ್ತಿಕ ಸಮಸ್ಯೆಗಳಿಗೆ ನಾನು ಸ್ಪಂದಿಸುವೆ, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಿಮ್ಮ ಸಲಹೆ, ಅಭಿಪ್ರಾಯ ಆಧರಿಸಿ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡುತ್ತೇನೆ, ನನಗೆ ಕೆಜಿಎಫ್ ನಗರ ಸಮಗ್ರವಾಗಿ ಅಭಿವೃದ್ಧಿ ಕಾಣಬೇಕೆಂಬ ಆಸೆಯೇ ಹೊರತು ಸ್ವಾರ್ಥವಿಲ್ಲ ಎಂದು ಸದಸ್ಯರಿಗೆ ಮನವರಿಕೆ ಮಾಡಿಕೊಟ್ಟು ನಗರಸಭೆಯಲ್ಲಿ ಕೈ ದರ್ಬಾರ್ ಕಾಣುವ ಆಸೆ ವ್ಯಕ್ತಪಡಿಸಿದ್ದಾರೆ.
ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸ್ಥಾಯಿ ಸಮಿತಿಗಳಿಗೆ ಚುನಾವಣೆ ದಿನದಂದು ಅಭ್ಯರ್ಥಿಗಳ ಹೆಸರು ಘೋಷಿಸಲಾಗುವುದು. ಐದು ವರ್ಷಗಳಲ್ಲಿ ಒಟ್ಟು 6 ಮಂದಿಗೆ ಅಧಿಕಾರ ನಡೆಸುವ ಅವಕಾಶವಿದೆ, ಆಯ್ಕೆ ಯಾರೇ ಆಗಿದ್ದರೂ ಅವರನ್ನು ಒಮ್ಮತದಿಂದ ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಹಾಜರಿಗೆ ಹರ್ಷ: ಪಕ್ಷೇತರ ಸದಸ್ಯರು ಯಾವುದೇ ಷರತ್ತುಗಳಿಲ್ಲದೆ ಕಾಂಗ್ರೆಸ್ ಬೆಂಬಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿದ್ದೀರಿ, ನಿಮ್ಮ ನಿರೀಕ್ಷೆ ಹುಸಿಗೊಳಿಸುವುದಿಲ್ಲ, ವಿರೋಧ ಪಕ್ಷದವರು ಏನೇ ತಂತ್ರಗಾರಿಕೆ ಮಾಡಿದರೂ ಕೈ ಆಡಳಿತ ತಪ್ಪಿಸಲು ಸಾಧ್ಯವಿಲ್ಲ, ಒಳ್ಳೆಯ ಆಡಳಿತದ ಮೂಲಕ ಜನರ ಮನಸ್ಸು ಗೆಲ್ಲೋಣ ಎಂದು ಹುರಿದುಂಬಿಸಿದ್ದಾರೆ.
ಕೆಜಿಎಫ್ ನಗರ ಕಾಂಗ್ರೆಸ್ ಘಟಕ ಅಧ್ಯಕ್ಷ ಮೊದಲಿಮುತ್ತು ಮಾತನಾಡಿ, ರೂಪಕಲಾ ಆಯ್ಕೆ ನಂತರ ಕೆಜಿಎಫ್ ಅಭಿವೃದ್ದಿ ಕಾಣುವಂತಾಗಿದೆ. ಮೂಲ ಸೌಲಭ್ಯಗಳಿಗಾಗಿ ಅಪಾರ ಕಾಳಜಿವಹಿಸಿದ್ದು ಅಧಿವೇಶನಗಳಲ್ಲಿ ಸಮಸ್ಯೆಗಳನ್ನು ಸರ್ಕಾರದ ಮುಂದಿಟ್ಟು ಒತ್ತಾಯಿಸಿದ್ದಾರೆ ಎಂದರು.
ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರು ಅಭಿಪ್ರಾಯ ಹಂಚಿಕೊಂಡರು. ಮುಖಂಡರಾದ ಸುರೇಶ್, ಜಯಂತಿ ಶ್ರೀನಿವಾಸ್, ಪುಣ್ಯಮೂರ್ತಿ, ಕುಮಾರ್, ಡೇವಿಡ್, ಜರ್ಮನ್ ಮುಂತಾದವರು ಉಪಸ್ಥಿತರಿದ್ದರು.