ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಶಾಸಕಿ ತರಾಟೆ : ವೇಮನ ಜಯಂತಿ ಪೂರ್ವಭಾವಿ ಸಭೆ ಕರೆಯದ್ದಕ್ಕೆ ಗರಂ

17 KGF 02 (1)
Published on

ಕೆಜಿಎಫ್: ಸರ್ಕಾರದ ಆದೇಶದಂತೆ ವೇಮನ ಜಯಂತಿ ಪೂರ್ವಭಾವಿ ಸಭೆಯನ್ನು ವಾರ ಮುಂಚಿತವಾಗಿ ಕರೆದು ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಇದ್ಯಾವುದೋ ಹೊಸ ಕೆಲಸ ಎಂದು ತಿಳಿದು ಅಸಡ್ಡೆ ತೋರುವುದು ಸರಿಯಲ್ಲ ಎಂದು ಶಾಸಕಿ ಎಂ. ರೂಪಕಲಾ ಅವರು ಶಿರಸ್ತೇದಾರ್ ಸುರೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು.
ತಾಲೂಕು ಆಡಳಿತ ಸೌಧದಲ್ಲಿ ಮಂಗಳವಾರ ಆಯೋಜಿಸಿದ್ದ ವೇಮನ ಜಯಂತಿ ಮತ್ತು ಗಣರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸರ್ಕಾರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಣೆಯ ಪರಿಕಲ್ಪನೆಯೇ ಇಲ್ಲದ ಹಾಗೆ ನಡೆದುಕೊಳ್ಳುವುದು ಸರಿಯಲ್ಲ. ಇದು ನಿಮ್ಮ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದ್ದು, ನಿಮ್ಮ ಅಶಿಸ್ತು, ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.

ಪ್ರತಿ ಬಾರಿಯು ವೇಮನ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆ ಕರೆಯುವುದಿಲ್ಲ ಎಂದು ಸಮುದಾಯದ ಮುಖಂಡರು ಅಸಮಾಧಾನವ್ಯಕ್ತಪಡಿಸುತ್ತಾರೆ. ಈ ಬಾರಿ ತಾಲೂಕು ಆಡಳಿತ ವತಿಯಿಂದ ನಡೆಸಲಾಗುವ ವೇಮನ ಜಯಂತಿಗೆ ಹಾಜರಾಗುವುದಿಲ್ಲ ಎಂದು ತಿಳಿಸಿರುವುದು ನೋವಿನ ಸಂಗತಿ. ಸರ್ಕಾರಿ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸುವುದು ಅಧಿಕಾರಿಗಳ ಜವಾಬ್ದಾರಿ. ಪದೇ ಪದೇ ಸಬೂಬು ಹೇಳಬಾರದು ಎಂದು ಶಾಸಕಿ ಸೂಚಿಸಿದರು.

ಕನಕ ಜಯಂತಿ, ವಾಲ್ಮೀಕಿ ಜಯಂತಿ ಇತ್ಯಾದಿ ಜಯಂತಿ ಆಚರಿಸುವಂತೆ ವೇಮನ ಜಯಂತಿಯನ್ನೂ ಶ್ರದ್ಧಾ ಭಕ್ತಿಯಿಂದ ಆಚರಿಸುವುದು ಕರ್ತವ್ಯ. ಸುಖಾ ಸುಮ್ಮನೆ ಕಾರಣ ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ಈಗಾಗಲೇ ಎರಡು ಮೂರು ಬಾರಿ ವೇಮನ ಜಯಂತಿ ಪೂರ್ವಭಾವಿ ಸಭೆ ಕರೆಯದೆ ತಾಲೂಕು ಆಡಳಿತ ತಪ್ಪುಮಾಡಿದೆ. ಮತ್ತೆ ಮತ್ತೆ ತಪ್ಪು ವಾಡುವುದು ಸರಿಯಲ್ಲ. ಮತ್ತೊಮ್ಮೆ ಇದು ಮರುಕಳಿಸಿದಲ್ಲಿ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದರು. ಪ್ರಶ್ನಿಸುವ ಅಧಿಕಾರ ನನಗೆ ಇರುವುದರಿಂದ ನಿಮ್ಮನ್ನು ಯಾಕೆ ಮಾಡಿಲ್ಲ ಎಂದು ಪ್ರಶ್ನಿಸುತ್ತಿದ್ದೇನೆ. ಆದರೆ, ನಿಮ್ಮ ಬೇಜವಾಬ್ದಾರಿತನ, ನಿಮ್ಮ ಅಸಡ್ಡೆ ನೋಡಿ ಇಡೀ ಸಮುದಾಯವೇ ನಿಮ್ಮಿಂದ ದೂರ ಉಳಿದಿದೆ. ನಿಮ್ಮನ್ನು ಕೇಳುವ ಗೋಜಿಗೆ ಹೋಗಿಲ್ಲ, ನಿಮಗೆ, ನಿಮ್ಮ ತಹಸೀಲ್ದಾರ್‌ಗೆ ಕಾರ್ಯಕ್ರಮಗಳ ಬಗ್ಗೆ ನೆನಪಿರುವುದಿಲ್ಲವೇ?. ಮೊದಲೇ ಕಾರ್ಯಕ್ರಮಗಳ ಪಟ್ಟಿ ತಯಾರಿಸಿಕೊಂಡು ವ್ಯವಸ್ಥಿತವಾಗಿ ನಡೆಸಬೇಕೆಂಬ ಕಾಳಜಿ ಇರುವುದಿಲ್ಲವೇ? ಎಂದು ಶಾಸಕಿ ಪ್ರಶ್ನಿಸಿದರು.

ಡಿಸಿಗೆ ಪತ್ರ : ಅಧಿಕಾರಿಗಳ ಕಾರ್ಯವೈಖರಿ, ಬೇಜವಾಬ್ದಾರಿತನದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಶಿಸ್ತು ಕ್ರಮಕ್ಕೆ ಶಿಫಾರಸ್ಸು ವಾಡಬಹುದು. ಆದರೆ, ಅದು ಮಾಡಿದರೆ ನಿಮ್ಮಲ್ಲಿ ಬದಲಾವಣೆ ಸಾಧ್ಯವಿಲ್ಲ. ನೀವಾಗಿಯೇ ಬದಲಾಗಬೇಕು. ಇದು ಕೊನೆಯ ಎಚ್ಚರಿಕೆ ಎಂದು ತಿಳಿದು ಈ ಕ್ಷಣದಿಂದಲೇ ಎಚ್ಚೆತ್ತುಕೊಂಡು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂದು ಎಂದು ಶಾಸಕಿ ತಾಕೀತು ಮಾಡಿದರು.

ತಾಲೂಕು ಪಂಚಾಯಿತಿ ಇಒ ಮಂಜುನಾಥ್, ನಗರಾಭಿವೃದ್ಧಿ ಪ್ರಾಧಿಕಾರದ ಕಮಿಷನರ್ ಜಹೀರ್ ಅಬ್ಬಾಸ್, ಬಿಇಒ ಚಂದ್ರಶೇಖರ್, ಕ್ಯಾಸಂಬಳ್ಳಿ ವಿಎಸ್‌ಎಸ್‌ಎನ್ ಅಧ್ಯಕ್ಷ ವಿಜಯರಾವರೆಡ್ಡಿ, ವಕೀಲ ಪದ್ಮನಾಭರೆಡ್ಡಿ, ಪಿಆರ್‌ಇಡಿ ಎಇಇ ಶೇಷಾದ್ರಿ, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ವಿದ್ಯಾರ್ಥಿಗಳಿಗೆ ಬಹಿಷ್ಕಾರ

ಕಳೆದ ಬಾರಿ ಗಣರಾಜ್ಯೋತ್ಸವ ದಿನದಂದು ನಗರದ ಊರಿಗಾಂನ ಪ್ರಥಮ ದರ್ಜೆ ಕಾಲೇಜಿನ ಪಿಯು ವಿಭಾಗದ ವಿದ್ಯಾರ್ಥಿಗಳು ಪಥ ಸಂಚಲನದಲ್ಲಿ ನೀಡಿದ ಪಾರಿತೋಷಕವನ್ನು ುಟ್‌ಬಾಲ್ ಚೆಂಡಿನಂತೆ ಆಟವಾಡುವ ಮೂಲಕ ಅಗೌರವ ತೋರಿದ್ದರಿಂದ ಈ ಬಾರಿ ಪಥಸಂಚಲನದಲ್ಲಿ ಆ ಕಾಲೇಜಿನ ವಿದ್ಯಾರ್ಥಿಗಳಿಗೆ ಅವಕಾಶ ನೀಡಬಾರದು ಎಂದು ಅಧಿಕಾರಿಗಳು ತಿಳಿಸಿದ್ದು, ಆ ವಿದ್ಯಾರ್ಥಿಗಳನ್ನು ಬಹಿಷ್ಕರಿಸುವಂತೆ ಸಭೆಯು ಒಮ್ಮತದ ತೀಮಾನ ತೆಗೆದುಕೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net