

ಮಂಡ್ಯ: ಮತದಾರರ ಪಟ್ಟಿಯ ದತ್ತಾಂಶ ಕಳವು ಪ್ರಕರಣದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಒಂದು ವೇಳೆ ಸಾಬೀತಾದರೆ ಸರ್ಕಾರ ಕ್ಷಮೆಯಾಚಿಸಬೇಕು. ಇನ್ನು ಮತದಾರರ ಹೆಸರನ್ನು ಕೈ ಬಿಡುವುದು ನಾಚಿಕೆಗೇಡಿನ ಸಂಗತಿ ಎಂದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದರು.
ತಾಲೂಕಿನ ಕ್ಯಾತುಂಗೆರೆ ಗ್ರಾಮದಲ್ಲಿ ಶುಕ್ರವಾರ 10 ಲಕ್ಷ ರೂ. ವೆಚ್ಚದಲ್ಲಿ ದೇವಾಲಯದ ಕಲ್ಯಾಣಿ ನಿರ್ಮಾಣಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಮತದಾರರ ದತ್ತಾಂಶ ಕಳವು ಹಾಗೂ ಕೆಲವರ ಹೆಸರು ಸೇರ್ಪಡೆ ಅಥವಾ ಕೈಬಿಡುವ ವಿಚಾರ ನಡೆದಿದ್ದರೆ ತಲೆತಗ್ಗಿಸುವ ಸಂಗತಿ. ರಾಜ್ಯ ಸರ್ಕಾರ ನಡೆಸುವವರ ಅಥವಾ ರಾಷ್ಟ್ರೀಯ ಪಕ್ಷದ ಪಾತ್ರವಿದ್ದರೆ ಅದರ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಇನ್ನು ಈಗಾಗಲೇ ಜಿಲ್ಲೆಯಲ್ಲಿ ಭತ್ತದ ಫಸಲು ಕಟಾವಿಗೆ ಬಂದಿದ್ದು, ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಗೆ ಕೂಡಲೇ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಮೈತ್ರಿ ಸರ್ಕಾರದ ಅವಧಿಯಲ್ಲಿ ಸಕಾಲದಲ್ಲಿ ಖರೀದಿ ಕೇಂದ್ರ ತೆರೆದು ರೈತರಿಗೆ ಅನುಕೂಲ ಕಲ್ಪಿಸಲಾಗಿತ್ತು. ದಲ್ಲಾಳಿಗಳು ಭತ್ತ ಖರೀದಿಸಿದ ಒಂದು ತಿಂಗಳ ನಂತರ ಖರೀದಿ ಕೇಂದ್ರ ತೆರೆದರೆ ರೈತರಿಗೆ ಅನುಕೂಲವಾಗುವುದಿಲ್ಲ. ಈ ವಿಚಾರದಲ್ಲಿ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ವಿವೇಚನೆ ವಹಿಸಿ ಖರೀದಿ ಕೇಂದ್ರ ತೆರೆಯಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಕಬ್ಬಿನ ಬೆಲೆ ನಿಗದಿಗೆ ರೈತರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಕಬ್ಬು ಬೆಳೆಯಲು ಅಪಾರ ಶ್ರಮವಿರುತ್ತದೆ. ರಾಸಾಯನಿಕ ಗೊಬ್ಬರ, ಕೊಟ್ಟಿಗೆ ಗೊಬ್ಬರ ಹಾಗೂ ಕೂಲಿ ಹೆಚ್ಚಳವಾಗಿದೆ. ಇದನ್ನು ಗಮನದಲ್ಲಿರಿಸಿಕೊಂಡು ಪ್ರತಿ ಟನ್ ಕಬ್ಬಿಗೆ ಕನಿಷ್ಟ 5 ಸಾವಿರ ರೂ ನಿಗದಿ ಮಾಡಬೇಕೆಂದು ಆಗ್ರಹಿಸಿದರು.
ಬೇವಿನಹಳ್ಳಿ ಗ್ರಾಪಂ ಅಧ್ಯಕ್ಷ ಯೋಗೇಶ್, ಸದಸ್ಯರಾದ ಕೆ.ಎಸ್.ಲೋಕೇಶ್, ಮಾಲತಿ ಸುರೇಶ್, ಕಾಳೇಗೌಡ, ಚೌದ್ರಿ, ಮುಖಂಡರಾದ ಕೆ.ಎಂ.ಬಸವರಾಜು, ಕೆ.ಟಿ.ಪುಟ್ಟಸ್ವಾಮಿ, ಶಿವರಾಮು, ಅಶೋಕ್ ಇತರರಿದ್ದರು.