ಕೆ.ಆರ್.ಪೇಟೆಗೆ ಸೀಮಿತವಾದ ಸಚಿವದ್ವಯರು: ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಟೀಕೆ

24_11_Mdy_06(Mla Ravindra)
Published on

ಮಂಡ್ಯ: ಸಚಿವರಾದ ಕೆ.ಗೋಪಾಲಯ್ಯ ಮತ್ತು ಕೆ.ಸಿ.ನಾರಾಯಣಗೌಡ ಅವರು ಕೆ.ಆರ್.ಪೇಟೆ ತಾಲೂಕಿಗಷ್ಟೇ ಸೀಮಿತರಾಗಿದ್ದು, ಜಿಲ್ಲೆಯ ಇತರ ತಾಲೂಕುಗಳ ಅಭಿವೃದ್ಧಿ ಕಡೆಗಣಿಸಿದ್ದಾರೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಟೀಕಿಸಿದರು.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ, ತಾಲೂಕಿನ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯ ರೈತರ ಸಮಸ್ಯೆಗಳು ಗಂಭೀರವಾಗಿವೆ. ರಸ್ತೆಗಳು ಗುಂಡಿಗಳಿಂದ ಆವೃತ್ತವಾಗಿವೆ. ಇಂತಹ ಗಂಭೀರ ವಿಚಾರದ ಬಗ್ಗೆ ಚರ್ಚಿಸಲು ಕೆಡಿಪಿ ಸಭೆ ಕರೆಯುವಂತೆ ಶಾಸಕರು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳು ಜನಸಾಮಾನ್ಯರ ಕೆಲಸ ಮಾಡಿಕೊಡುತ್ತಿಲ್ಲ. ಟೆಂಡರ್ ತೆರೆದು ತಿಂಗಳಾದರೂ ಗುತ್ತಿಗೆದಾರರಿಗೆ ಅಗ್ರಿಮೆಂಟ್ ಮಾಡಲು ಮುಂದಾಗುತ್ತಿಲ್ಲ. ಜೆಡಿಎಸ್ ಶಾಸಕರು ಗಲಾಟೆ ಮಾಡಿ ಕಾಮಗಾರಿ ಆರಂಭಿಸುವ ಅನಿವಾರ್ಯತೆ ಬಂದೊದಗಿದೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಗೆ ಮಂಜೂರು ಮಾಡಿದ್ದ 8 ಸಾವಿರ ಕೋಟಿ ರೂ. ಅನುದಾನದ ಬಹುಪಾಲು ನಿಲುಗಡೆಗೆ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಕಾರಣಕರ್ತರು. ಜಿಲ್ಲೆಯ ವ್ಯವಸ್ಥೆಯನ್ನು ಹಾಳು ಮಾಡಲು ಮುಂದಾಗಿರುವ ಅವರು ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿ ಅನುದಾನ ತಡೆಹಿಡಿದಿದ್ದಾರೆ. ಜಿಲ್ಲೆಯ ಜನರ ದಾರಿ ತಪ್ಪಿಸಲು ಜೆಡಿಎಸ್ ಅಧಿಕಾರಾವಧಿಯಲ್ಲಿ ನಿರೀಕ್ಷಿತ ಯೋಜನೆಗಳು ಮಂಜೂರಾಗಿಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಗಂಭೀರವಾಗಿ ಪರಿಗಣಿಸಿ: ವಿಶ್ವ ಪ್ರಸಿದ್ಧ ಪ್ರವಾಸಿತಾಣ ಕೆಆರ್‌ಎಸ್ ಅಣೆಕಟ್ಟೆಯ ಬೃಂದಾವನದಲ್ಲಿ ಚಿರತೆ ಹಾವಳಿ ತಡೆಯಲು ರಾಜ್ಯ ಸರ್ಕಾರ ಗಂಭೀರ ಪ್ರಯತ್ನ ಮಾಡಿಲ್ಲ. ಸ್ಥಳೀಯ ಅಧಿಕಾರಿಗಳಿಗೆ ಹೊಣೆಗಾರಿಕೆ ನೀಡಿ ಕೈ ಚೆಲ್ಲಿದೆ. ಬೃಂದಾವನದ ವರ್ಚಸ್ಸು ಹಾಳಾದರೆ, ಮತ್ತೆ ಸರಿಪಡಿಸಲು ಸಾಧ್ಯವಿಲ್ಲ ಎಂಬ ಅರಿವು ಹಾಗೂ ಗಂಭೀರತೆ ಸರ್ಕಾರಕ್ಕಿಲ್ಲ ಎಂದು ದೂರಿದರು.

ಶ್ರೀರಂಗಪಟ್ಟಣ ಕ್ಷೇತ್ರದ ಗ್ರಾಮೀಣ ಪ್ರದೇಶಗಳ ಮೂಲಸೌಲಭ್ಯ ಸೇರಿದಂತೆ ಹಲವು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 2 ವರ್ಷ ಜಗತ್ತನ್ನು ಕಾಡಿದ ಕೋವಿಡ್‌ನಿಂದಾಗಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದವು. ಈ ವರ್ಷದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಪ್ರಸ್ತುತ ಮಳೆ ಕಡಿಮೆಯಾಗಿರುವುದರಿಂದ ರಸ್ತೆಗಳ ದುರಸ್ತಿಗೆ ಮುಂದಾಗಿದ್ದು, ಹಂತ-ಹಂತವಾಗಿ ಎಲ್ಲ ರಸ್ತೆಗಳನ್ನು ಆದ್ಯತೆ ಮೇರೆಗೆ ದುರಸ್ತಿಪಡಿಸಲಾಗುವುದು ಎಂದು ತಿಳಿಸಿದರು.

ಸಂತೆಕಸಲಗೆರೆ ಗ್ರಾಪಂ ಅಧ್ಯಕ್ಷೆ ಸೌಮ್ಯಾ ನಟರಾಜು, ಸದಸ್ಯರಾದ ಬಸವರಾಜು, ಕೆ.ಬಿ.ರವೀಶ್, ಶಿವಲಿಂಗಶೆಟ್ಟಿ, ಸೌಮ್ಯಾ, ಪಾರ್ವತಮ್ಮ, ಸಾಕಮ್ಮ, ಲಕ್ಷ್ಮೀ, ಮಮತಾ, ಮಾಜಿ ಅಧ್ಯಕ್ಷ ಲಿಂಗಣ್ಣ, ಗುತ್ತಿಗೆದಾರರಾದ ನರೇಂದ್ರ, ನಟರಾಜು, ಮುಖಂಡರಾದ ರಾಕೇಶ್, ಅಂಗಡಿ ಶಂಕರಣ್ಣ, ಪಾಪಣ್ಣ, ಕೆಆರ್‌ಐಡಿಎಲ್ ಎಇಇ ಸೋಮಶೇಖರ್, ಎಇ ರಾಜೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net