

ಮಂಡ್ಯ: ಅಭಿವೃದ್ಧಿ ಕಾಮಗಾರಿ ಗುಣಮಟ್ಟದಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಗುತ್ತಿಗೆದಾರರಿಗೆ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಸೂಚನೆ ನೀಡಿದರು.
ತಾಲೂಕಿನ ಹಳುವಾಡಿ ಗ್ರಾಮದಲ್ಲಿ 76 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಗ್ರಾಮದ ಮೂರು ರಸ್ತೆಗಳಿಗೆ ಡಾಂಬರು, ಚರಂಡಿ ನಿರ್ಮಾಣ ಹಾಗೂ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಹಲವು ವರ್ಷಗಳಿಂದ ಗ್ರಾಮದ ರಸ್ತೆಗಳು ಅಭಿವೃದ್ಧಿ ಕಾಣದೇ ಗುಂಡಿ ಬಿದ್ದಿದ್ದವು ಎಂದರು.
ಗ್ರಂಥಾಲಯಕ್ಕೆ ಸ್ವಂತ ಕಟ್ಟಡವಿಲ್ಲದೆ ತೊಂದರೆಯಾಗಿತ್ತು. ಇದನ್ನು ಮನಗಂಡು ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. ಗ್ರಾಮದ ಒಂದು ಮುಖ್ಯ ರಸ್ತೆ, ಎರಡು ಬೀದಿಗಳ ಅಭಿವೃದ್ಧಿಗೆ 55 ಲಕ್ಷ ರೂ. ಚರಂಡಿ ಕಾಮಗಾರಿಗೆ 12 ಲಕ್ಷ ರೂ. ಹಾಗೂ ಗ್ರಂಥಾಲಯ ಕಟ್ಟಡ ನಿರ್ಮಾಣ ಸೇರಿ ಒಟ್ಟು 76 ಲಕ್ಷ ರೂ. ವೆಚ್ಚದ ಕಾಮಗಾರಿ ನಡೆಯಲಿದೆ ಎಂದು ವಿವರಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷರಾದ ಎಚ್.ಎಂ.ಸಿದ್ದರಾಜು, ರಮೇಶ್, ಕುಳಾರಿ ಮರೀಗೌಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಮಂಚೇಗೌಡ, ಹಾಲಿ ನಿರ್ದೇಶಕ ಮಂಚೇಗೌಡ, ಜಿ.ಪಂ. ಮಾಜಿ ಸದಸ್ಯ ದಂಡಿ ವೆಂಕಟೇಗೌಡ, ಯಜಮಾನ್ ಮೊಳ್ಳೆಕಾಳ ನಾಗರಾಜು, ಗ್ರಾ.ಪಂ. ಸದಸ್ಯರಾದ ಚೀರನಹಳ್ಳಿ ಸುರೇಶ್, ಕೃಷ್ಣ, ಮುಖಂಡರಾದ ವೆಂಕಟರಮಣೇಗೌಡ, ಮಾದೇಗೌಡ, ಮಂಚೇಗೌಡ, ಯುವ ಮುಖಂಡರಾದ ಅನಿಲ್‌ಕುಮಾರ್, ದಂಡಿ ತಮ್ಮಯ್ಯ, ರಾಜು, ಪಾಪಣ್ಣ ಇತರರಿದ್ದರು.