ಪ್ರಧಾನಿ ಮೋದಿ ವಿರುದ್ಧ ಪ್ರತಿಭಟಿಸುತ್ತಿದ್ದಾರಾ?: ಶಾಸಕ ರವಿಕುಮಾರ್ ಗಣಿಗ ವ್ಯಂಗ್ಯ

Mla Ravikumar Ganiga
Published on

ಮಂಡ್ಯ: ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಮಾಡುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹಿಳೆಯರ ಬಾಯಿಗೆ ಮಣ್ಣಾಕಿದ್ದಾರೆ. ಇದಕ್ಕೆ ಮೋದಿ ವಿರುದ್ಧ ಬಿಜೆಪಿ ನಾಯಕರು ಪ್ರತಿಭಟನೆ ಮಾಡುತ್ತಿದ್ದಾರಾ ಎಂದು ಶಾಸಕ ರವಿಕುಮಾರ್ ಗಣಿಗ ವ್ಯಂಗ್ಯವಾಡಿದರು.

ರಾಜ್ಯಸರ್ಕಾರದ ವಿರುದ್ಧ ಬಿಜೆಪಿ ಜನಾಕ್ರೋಶ ಯಾತ್ರೆ ನಡೆಸುತ್ತಿರುವ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಗ್ಯಾಸ್ ಬೆಲೆ ಏರಿಕೆ ಮಾಡಿದೆ. ಇದನ್ನು ವಿರೋಧಿಸಿ ಮಂಡ್ಯದಲ್ಲಿ ಬಿಜೆಪಿ ಪ್ರತಿಭಟನೆ ಮಾಡುತ್ತಿದ್ದಾರಾ?. ಪ್ರಧಾನಿ ಮೋದಿ ವಿರುದ್ದ ಪ್ರತಿಭಟನೆಗೆ ಬಂದ ಬಿಜೆಪಿ ನಾಯಕರಿಗೆ ಮಜ್ಜಿಗೆ ಕೊಡುತ್ತೇವೆ. ಇವತ್ತಾದರೂ ಬಿಜೆಪಿಗರಿಗೆ ಶ್ರೀರಾಮ ಕಣ್ಣು ತೆರೆಸಿದ್ದಾರೆ. ತಮ್ಮದೆ ನಾಯಕರ ವಿರುದ್ದ ಪ್ರತಿಭಟನೆ ಮಾಡುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದ ಶಾಸಕ ರವಿಕುಮಾರ್ ಗಣಿಗ, ರಾಜ್ಯ ಸರ್ಕಾರಕ್ಕೆ ಕೊಡಬೇಕಾದ ಪಾಲು ಕೊಟ್ಟಿದ್ದರೆ ಬೆಲೆ ಏರಿಕೆ ಆಗುತ್ತಿರಲಿಲ್ಲ. ನಮ್ಮ ಹಣವನ್ನೆಲ್ಲ ಪಡೆದುಕೊಂಡು ನಮಗೆ ವಾಪಸ್ ಕೊಡುತ್ತಿಲ್ಲ. ಯಾವ ಮುಖ ಇಟ್ಟುಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಂಡ್ಯದಲ್ಲಿ ಪ್ರತಿಭಟನೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ಜೋಕರ್ ಎಂದು ಟೀಕಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಟಾಂಗ್ ನೀಡಿದ ಶಾಸಕ ರವಿಕುಮಾರ್ ಗಣಿಗ, ಜೆಡಿಎಸ್ ಪಕ್ಷವನ್ನು ಬಿಜೆಪಿ ಜೋಕರ್ ಸ್ಥಾನದಲ್ಲಿ ನಿಲ್ಲಿಸಿದೆ. ಮಂಡ್ಯದಲ್ಲಿ ಜೆಡಿಎಸ್ ಬಿಟ್ಟು ಬಿಜೆಪಿ ಜನಾಕ್ರೋಶ ಯಾತ್ರೆ ಮಾಡುತ್ತಿದೆ. ಎಚ್.ಡಿ.ಕುಮಾರಸ್ವಾಮಿ ಕ್ಷೇತ್ರದಲ್ಲೇ ಅವರನ್ನು ಬಿಟ್ಟಿದ್ದಾರೆ. ಬರೀ ಬಿಜೆಪಿಯವರು ಮಾತ್ರ ಪ್ರತಿಭಟನೆ ಮಾಡುತ್ತಿರುವುದರಿಂದ ಮೈತ್ರಿಯಲ್ಲಿ ಬಿರುಕು ಇದೆ ಎಂದು ಗೊತ್ತಾಗುತ್ತಿದೆ. ಕುಮಾರಸ್ವಾಮಿ ಅವರಿಗೆ ಪಾಪ ಈ ಪರಿಸ್ಥಿತಿ ಬರಬಾರದಿತ್ತು. ಎಚ್‌ಡಿಕೆ ಎಲ್ಲಿಗೆ ಹೋದರೂ ಈ ರೀತಿ ಬೆನ್ನಿಗೆ ಚಾಕು ಹಾಕಿಸಿಕೊಳ್ಳುತ್ತಾರೆ. ಗುಜರಾತ್ ರೀತಿ ಕರ್ನಾಟಕದಲ್ಲೂ ನಿಮ್ಮ ಜೆಡಿಎಸ್ ಮುಗಿಸುತ್ತಾರೆ, ಕುಮಾರಣ್ಣ ಹುಷಾರಾಗಿರಲಿ. ಎಚ್‌ಡಿಕೆ ಅವರಿಗೆ ಇದು ಎಚ್ಚರಿಕೆ ಗಂಟೆ ಎಂದು ವ್ಯಂಗ್ಯವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net