ಜಿಲ್ಲಾ ಕ್ರೀಡಾಂಗಣದಲ್ಲಿ ಕಳಪೆ ಕಾಮಗಾರಿ: ಗುತ್ತಿಗೆದಾರನಿಗೆ ನೋಟಿಸ್ ನೀಡಲು ಶಾಸಕ ರವಿಕುಮಾರ್ ಗಣಿಗ ಸೂಚನೆ

1 (1)
Published on

ಮಂಡ್ಯ: ನಗರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾಡಿರುವ ಕಾಮಗಾರಿ ಕಳಪೆಯಾಗಿದ್ದು, ಸಂಬಂಧಪಟ್ಟ ಗುತ್ತಿಗೆದಾರನಿಗೆ ನೋಟಿಸ್ ಜಾರಿ ಮಾಡುವುದರ ಜತೆಗೆ ಕ್ರಮ ತೆಗೆದುಕೊಳ್ಳುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗೆ ಶಾಸಕ ರವಿಕುಮಾರ್ ಗಣಿಗ ಸೂಚನೆ ನೀಡಿದರು.

ಕಾಮಗಾರಿ ಕಳಪೆ ಜತೆಗೆ ಒಂದು ವರ್ಷ ಸಮೀಪಿಸುತ್ತಿದ್ದರೂ ಪೂರ್ಣಗೊಳ್ಳದ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬಂದ ಹಿನ್ನೆಲೆಯಲ್ಲಿ  ಕ್ರೀಡಾಂಗಣಕ್ಕೆ ಭೇಟಿ ನೀಡಿ ಅಧಿಕಾರಿ ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದರು. ಈ ವೇಳೆ ಕಾಮಗಾರಿ ಬಗ್ಗೆ ಹಲವು ದೂರು ಕೇಳಿಬಂದವು. ನಿರೀಕ್ಷೆ ಹಾಗೂ ಹಣಕ್ಕೆ ತಕ್ಕಂತೆ ಕೆಲಸ ನಡೆಯುತ್ತಿಲ್ಲ. ಸರಿಯಾಗಿ ನೀರಿನ ಕ್ಯೂರಿಂಗ್ ಮಾಡಿಲ್ಲ. ಚೆನ್ನಾಗಿದ್ದ ಕ್ರೀಡಾಂಗಣವನ್ನು ಹಾಳು ಮಾಡಲಾಗಿದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿ, ಸರಿಯಾದ ರೀತಿ ಕ್ರೀಡಾಂಗಣದ ಅಭಿವೃದ್ಧಿಯಾಗಿಲ್ಲ. ಹೀಗಾದರೆ ಕ್ರೀಡಾಪಟುಗಳಿಗೆ ಅನುಕೂಲವಾಗುವುದಿಲ್ಲ. ಸಂಬಂಧಪಟ್ಟ ಗುತ್ತಿಗೆದಾರನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಇನ್ನು ಸ್ಥಳೀಯರು ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಸ್ಕೆಟ್‌ಬಾಲ್ ಕ್ರೀಡಾಂಕಣ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಇದರೊಟ್ಟಿಗೆ ಖೋಖೋ ಆಟಕ್ಕೂ ಸುಸಜ್ಜಿತ ಅಂಕಣದ ಅವಶ್ಯಕತೆ ಇದೆ. ಈ ಸಂಬಂಧ ಕ್ರಮ ವಹಿಸುವುದರ ಜತೆಗೆ ಅಗತ್ಯ ಕ್ರೀಡಾಂಕಣಗಳನ್ನು ಮಾಡಿಕೊಡಲಾಗುವುದು. ಅಂತೆಯೇ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡಲು ವ್ಯವಸ್ಥೆ ಮಾಡಿಕೊಡಬೇಕು ಎಂದು ಸೂಚನೆ ನೀಡಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂಪ್ರಕಾಶ್, ನಗರಸಭೆ ಸದಸ್ಯ ಅರುಣ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net