ನಗರದಲ್ಲಿರುವ ಸರ್ಕಾರಿ ಆಸ್ತಿ ಸಂರಕ್ಷಣೆ ಮಾಡಿ: ಶಾಸಕ ರವಿಕುಮಾರ್ ಗಣಿಗ ಸೂಚನೆ

MLA Ravikumar visit to Municipal Council wards mandya
Published on

ಮಂಡ್ಯ: ನಗರಸಭೆಗೆ ಸೇರಿದ ಸರ್ಕಾರಿ ಆಸ್ತಿಯನ್ನು ಖಾಸಗಿ ವ್ಯಕ್ತಿಗಳ ವಶದಲ್ಲಿದ್ದರೆ ಅದನ್ನು ಸ್ವಾಧೀನಪಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.

ನಗರದ ವಿವಿಧ ವಾರ್ಡ್‌ನಲ್ಲಿ ಆಯೋಜಿಸಿದ್ದ ಜನತಾದರ್ಶನ ವೇಳೆ ಮಾತನಾಡಿದ ಅವರು, ಭವಿಷ್ಯದ ದೃಷ್ಟಿಯಿಂದ ನಗರದಲ್ಲಿ ಜಾಗದ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಸರ್ಕಾರದ ಜಾಗವನ್ನು ಖಾಸಗಿ ವ್ಯಕ್ತಿಗಳು ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಪರಿಶೀಲಿಸಬೇಕು. ಅದರಂತೆ ಅಕ್ರಮವಾಗಿ ಬಳಸಿಕೊಳ್ಳುತ್ತಿದ್ದರೆ ತಮ್ಮ ವಶಕ್ಕೆ ಪಡೆಯುವಂತೆ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದು ಹೇಳಿದರು.

ಇನ್ನು ರಾಜಕಾಲುವೆ ಸಮಸ್ಯೆಯಿಂದ ಕೆಲ ವಾರ್ಡ್‌ನ ಜನರು ನೊಂದು ಹೋಗಿದ್ದಾರೆ. ಬೇರೆ ವಾರ್ಡ್‌ನ ಗಲೀಜು ನೀರು ಬರುವುದರಿಂದ ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜಕಾಲುವೆ ಅಭಿವೃದ್ಧಿ ಸಂಬಂಧ ಕ್ರಮ ವಹಿಸಲಾಗುತ್ತಿದೆ. ಈ ನಡುವೆ ಯಾರಾದರೂ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮನೆ ಅಥವಾ ಇನ್ಯಾವುದೇ ಕಟ್ಟಡ ಕಟ್ಟಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳುವುದು ಖಚಿತ ಎಂದು ಎಚ್ಚರಿಕೆ ನೀಡಿದರು.

ಸಮಸ್ಯೆಗಳ ಅನಾವರಣ: ನಗರದ 10, 12 ಮತ್ತು 13ನೇ ವಾರ್ಡ್‌ನಲ್ಲಿ ಶಾಸಕರು ಸಾರ್ವಜನಿಕರ ಕುಂದುಕೊರತೆ ಆಲಿಸುವ ವೇಳೆ ಸ್ಥಳೀಯ ಸಮಸ್ಯೆಗಳು ಅನಾವರಣಗೊಂಡವು. ರಸ್ತೆ ಮತ್ತು ಚರಂಡಿಗಳ ಅಸ್ವಚ್ಚತೆ, ಅರ್ಧಂಬರ್ಧ ಮಾಡಿರುವ ರಸ್ತೆ, ಮುರಿದು ಬಿದ್ದಿರುವ ಚರಂಡಿ, ಫುಟ್‌ಪಾತ್ ಅತಿಕ್ರಮ, ಜನವಸತಿ ಪ್ರದೇಶದಲ್ಲಿರುವ ವೈನ್‌ಸ್ಟೋರ್‌ಗಳಿಂದಾಗುತ್ತಿರುವ ತೊಂದರೆಗಳನ್ನು ಜನರು ಹೇಳಿಕೊಂಡರು.

13ನೇ ವಾರ್ಡ್ ಗಾಂಧಿನಗರದಿಂದ ಆರಂಭಗೊಂಡ ಜನತಾದರ್ಶನದಲ್ಲಿ ಶಾಸಕ ರವಿಕುಮಾರ್ ಗಣಿಗ ಅಧಿಕಾರಿಗಳೊಂದಿಗೆ ಪಾದಯಾತ್ರೆಯಲ್ಲಿ ತೆರಳಿ ಜನ-ಸಾಮಾನ್ಯರ ಸಮಸ್ಯೆ ಆಲಿಸಿದರು. ರಸ್ತೆ ಮತ್ತು ಚರಂಡಿ ಸ್ವಚ್ಛ ಮಾಡಲ್ಲ, ಚರಂಡಿಗಳು ಸೊಳ್ಳೆಗಳ ತಾಣವಾಗಿದೆ, ಕುಡಿಯವ ನೀರು ಸಮರ್ಪಕವಾಗಿ ಸರಬರಾಜು ಮಾಡುವುದಿಲ್ಲ, ರಸ್ತೆಗಳೆಲ್ಲ ಹಳ್ಳಗುಂಡಿ ಬಿದ್ದಿವೆ. ಆದರೂ ನಗರಸಭೆ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂಬ ದೂರುಗಳ ಕೇಳಿಬಂದವು.

ನೂರಡಿ ರಸ್ತೆಗೆ ಬಂದಾಗ ಅಂಬೇಡ್ಕರ್ ರಸ್ತೆ ನಾಮಫಲಕ ಹಾಕುವಂತೆ ದಲಿತ ಮುಖಂಡರು ಒತ್ತಾಯಿಸಿದಾಗ ಈಗಾಗಲೇ ನಾಮಫಲಕ ಸಿದ್ಧವಾಗುತ್ತಿದೆ. ಕೆಲವೇ ದಿನದಲ್ಲಿ ಹಾಕಲಾಗುವುದು ಎಂದು ಶಾಸಕರು ತಿಳಿಸಿದರು. ಅದೇ ರೀತಿ ವ್ಯಾಪಾರಿಗಳು ಫುಟ್‌ಪಾತ್‌ನಲ್ಲಿ ಮಾರಾಟದ ವಸ್ತುಗಳನ್ನಿಟ್ಟು ಅತಿಕ್ರಮಿಸಿರುವುದರಿಂದ ಪಾದಚಾರಿಗಳ ಓಡಾಟಕ್ಕೆ ತೊಂದರೆಯಾಗಿರುವ ಬಗ್ಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.

ನಗರಸಭೆ ಸದಸ್ಯರಾದ ಎಂ.ಸಿ.ಶಿವಪ್ರಕಾಶ್, ಶ್ರೀಧರ್, ಪೌರಾಯುಕ್ತ ಮಂಜುನಾಥ್, ಇಂಜಿನಿಯರ್ ರವಿಕುಮಾರ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಮುಖಂಡರಾದ ಗುರುಕುಮಾರ್, ಅಸದುಲ್ಲಾಖಾನ್, ರುದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net