ಜಾತಿಗಣತಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ: ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಸ್ಪಷ್ಟನುಡಿ

Mla Ravikumar Ganiga
Published on

ಮಂಡ್ಯ: ಜಾತಿಗಣತಿ ಮಾಡಲು ನನ್ನ ಮನೆಗೆ ಯಾರೂ ಬಂದಿಲ್ಲ. ಆದ್ದರಿಂದ ಈ ಜಾತಿಗಣತಿಯನ್ನ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಆದ್ದರಿಂದ ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮರು ಪರಿಶೀಲನೆ ನಡೆಸುವಂತೆ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಒತ್ತಾಯಿಸಿದರು.

ತಾಲೂಕಿನ ಹೊಡಾಘಟ್ಟ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಕ್ಕಲಿಗರು ಒಂದು ಕೋಟಿಗೂ ಹೆಚ್ಚು ಜನರಿದ್ದಾರೆ. ಜಾತಿಗಣತಿ ಮಾಡಲು ನನ್ನ ಮನೆಗೆ ಬಂದಿಲ್ಲ. ಈ ರೀತಿ ತುಂಬ ಪ್ರಸಂಗಗಳು ಇವೆ. ಇದು ಸರ್ಕಾರದ ಸಮಸ್ಯೆಯಲ್ಲ, ಬದಲಿಗೆ ಸರ್ವೆ ಮಾಡಿದವರ ಸಮಸ್ಯೆ. ಈ ಸಂಬಂಧ ಡಿಸಿಎಂ ಕರೆದಿರುವ ಸಭೆಗೆ ಹೋಗುತ್ತಿದ್ದೇನೆ. ಮುಂದೆ ಏನು ಮಾಡಬೇಕು ಎಂದು ನಮ್ಮ ಸಮಾಜದ ಮಂತ್ರಿಗಳು, ಶಾಸಕರು, ಮಠಾಧೀಶರು ತೀರ್ಮಾನ ಮಾಡಲಿದ್ದಾರೆ. ಒಕ್ಕಲಿಗರು ಎಷ್ಟಿದ್ದಾರೆ ಎಂದು ಮತ್ತೊಮ್ಮೆ ಸರ್ವೆ ಮಾಡಲಿ. ಕಾಂತರಾಜು ವರದಿ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ದ್ವೇಷದ ಜಾತಿಗಣತಿ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಶಾಸಕ ರವಿಕುಮಾರ್ ಗಣಿಗ, ಕುಮಾರಣ್ಣ ಬರೀ ದ್ವೇಷ ಮಾಡುವುದು, ಹೊಡಿ ಮತ್ತು ಹೊಡೆದಾಟ ಇದೆ ಅವರದು. ಮಾಜಿ ಸಿಎಂ, ಮಾಜಿ ಪ್ರಧಾನಿ ಮಗ ಸಲಹೆ ಕೊಡಲಿ ಸ್ವೀಕಾರ ಮಾಡುತ್ತೇವೆ. ಎಲ್ಲರ ಮೇಲೆ ದಾಳಿ ಮಾಡುವುದರಿಂದ ಸಮಾಜವನ್ನು ಮೇಲಕ್ಕೆ ಎತ್ತಲ್ಲಾಗುವುದಿಲ್ಲ. ಒಕ್ಕಲಿಗರಿಗೆ ಏನಾಗಬೇಕೆಂದು ಸಲಹೆ ಕೊಡಲಿ. ಅದನ್ನ ಬಿಟ್ಟು ಬರಿ ನಿಂದಿಸಿಕೊಂಡು ಓಡಾಡಿದರೆ ಒಕ್ಕಲಿಗರನ್ನು ಉದ್ದಾರ ಮಾಡಕ್ಕಾಗಲ್ಲ. ಎರಡೂ ಬಾರಿ ಮುಖ್ಯಮಂತ್ರಿ ಆಗಿದ್ದವರು ಸಲಹೆ ಕೊಡಲಿ. ಅದನ್ನ ಬಿಟ್ಟು ಬರಿ ಮಾತನಾಡಿದರೆ ಏನು ಪ್ರಯೋಜನ ಇಲ್ಲ ಎಂದರು.

ಪೆನ್ನು, ಪೇಪರ್ ಕೇಳಿದ ವ್ಯಕ್ತಿ ಸಮಾಜವನ್ನು ಮರಣಶಾಸನ ಬರೆಯಲು ಹೊರಟಿದ್ದಾರೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಎಚ್‌ಡಿಕೆ ನೀಡಿರುವ ಹೇಳಿಕೆಗೆ ಕಿಡಿಕಾರಿದ ರವಿಕುಮಾರ್ ಗಣಿಗ, ಡಿ.ಕೆ.ಶಿವಕುಮಾರ್ ಪೆನ್ನು, ಪೇಪರ್ ಕೊಡಿ ಎಂದು ಕೇಳಿದ್ದು ನಿಜ. ಡಿಕೆಶಿ ಅವರೇನು ಜಾತಿ ಗಣತಿ ಮಾಡಿಲ್ಲ. ಒಬ್ಬರ ಕಾಲು ಮತ್ತೊಬ್ಬರು ಎಳೆದು ನಮ್ಮ ಸಮಾಜ ಈ ಪರಿಸ್ಥಿತಿಗೆ ಬಂದಿದೆ. ಸಮಾಜ ಸಂಕಷ್ಟದಲ್ಲಿದ್ದಾಗ ನಾವೆಲ್ಲರೂ ಒಗ್ಗಟ್ಟಾಗಿರಬೇಕು ಎಂದು ಸಲಹೆ ನೀಡಿದರು.

ಮಂಡ್ಯ ಅಭಿವೃದ್ಧಿ ಬಗ್ಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಬಹಿರಂಗ ಚರ್ಚೆಗೆ ಆಹ್ವಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಂಡ್ಯದ ಕೃಷಿ ವಿವಿಯನ್ನು ಹಾಸನಕ್ಕೆ ಬೇಕೆಂದು ಕೇಳುತ್ತಾರೆ. ಇವರು ಮಂಡ್ಯಕ್ಕೆ ಏನು ಮಾಡಿದ್ದಾರೆ. ಜೆಡಿಎಸ್‌ನವರು ಮಂಡ್ಯ ಅಭಿವೃದ್ಧಿ ವಿಚಾರದಲ್ಲಿ ಸೊನ್ನೆ. ಆದ್ದರಿಂದ ಮಂಡ್ಯ ಬಗ್ಗೆ ಮಾತನಾಡುವುದಕ್ಕೆ ನೈತಿಕತೆ ಅವರಿಗಿಲ್ಲ. ಒಂದು ರಸ್ತೆಗೆ ಡಾಂಬರಿಕರಣ ಮಾಡಿಸಿಲ್ಲ. ನಾಲೆ ಅಭಿವೃದ್ಧಿಗೆ ಏನಾದರೂ ಅನುದಾನ ತಂದಿದ್ದೇನೆ ಎಂದು ಶ್ವೇತಪತ್ರ ತರಲಿ. ರೇವಣ್ಣ ಹಾಸನ ಅಭಿವೃದ್ಧಿ ಮಾಡಿದ್ದಾರೆ, ಮಂಡ್ಯಕ್ಕೆ ಏನು ಮಾಡಿಲ್ಲ. ಎಲ್ಲಿಗಾದರೂ ಬರಲಿ ಚರ್ಚೆಗೆ ನಾನು ಸಿದ್ದ. ಮಂಡ್ಯ ವಿಶ್ವವಿದ್ಯಾನಿಲಯವನ್ನು ತಂದಿದ್ದು ಬಿಜೆಪಿಯವರು. ಆದರೆ ಅಲ್ಲಿನವರಿಗೆ ನಾನು ಸಂಬಳ ಕೊಡುತ್ತಿದ್ದೇವೆ, ಇದರೊಂದಿಗೆ ಮಂಡ್ಯ ವಿವಿ ಉಳಿಸಿದ್ದೇವೆ. ನಮ್ಮ ಮುಖ್ಯಮಂತ್ರಿಯಿಂದ ಹೆಚ್ಚಿನ ಅನುದಾನ ತಂದು ಹಲವಾರು ಕೆಲಸ ಮಾಡುತ್ತಿದ್ದೇವೆ. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ 250 ಕೋಟಿ ರೂಗೂ ಹೆಚ್ವಿನ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದು ತಿರುಗೇಟು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net