ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ: ಶಾಸಕ ರವಿಕುಮಾರ್ ಗಣಿಗ ಕಿವಿಮಾತು

MLA Ravikumar started development work in Kannali village mandya
Published on

ಮಂಡ್ಯ: ಜನಸಾಮಾನ್ಯರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.

ತಾಲೂಕಿನ ಕನ್ನಲಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕನ್ನಲಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಬುಧವಾರ 2023-24ನೇ ಸಾಲಿನ ಜಲಜೀವನ್ ಮಿಷನ್(ಜೆಜೆಎಂ) ಯೋಜನೆಯಡಿ ಕುಡಿಯುವ ನೀರಿನ ಪೈಪ್‌ಲೈನ್, ನೀರಿನ ಟ್ಯಾಂಕ್ ಮತ್ತು 544 ಕುಟುಂಬಗಳ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ಮಹಿಳೆಯರು ಮತ್ತು ನಿರುದ್ಯೋಗಿಗಳು ಸದುಪಯೋಗಪಡಿಸಿಕೊಳ್ಳಬೇಕು. ಒಂದು ವೇಳೆ ಹಣ ಬಾರದಿದ್ದರೆ ನಾಡಕಚೇರಿ ಅಥವಾ ಸ್ಥಳೀಯ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಗ್ರಾಮೀಣ ಜನತೆಗೆ ಮನೆ ಬಾಗಿಲ ಬಳಿಯೇ ಶುದ್ಧ ಕುಡಿಯುವ ನದಿ ನೀರು ಸೌಲಭ್ಯ ಒದಗಿಸಲಾಗುತ್ತಿದೆ. ಅದರಂತೆ ಕನ್ನಲಿ ಗ್ರಾಮಕ್ಕೆ ಸ್ವಾತಂತ್ರೃ ಬಂದ ನಂತರದ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 1.53 ಕೋಟಿ ರೂ ಮೊತ್ತದ ಯೋಜನೆ ಬಂದಿದೆ. ಮನೆ ಬಾಗಿಲಿಗೆ ಕಾವೇರಿ ನೀರು ಒದಗಿಸಲು ಹಾಗೂ 50 ಸಾವಿರ ಸಾಮರ್ಥ್ಯದ ವಾಟರ್‌ಟ್ಯಾಂಕ್ ನಿರ್ಮಾಣವಾಗುತ್ತಿದೆ. ಮುಂದಿನ ದಿನದಲ್ಲಿ ಬೂದನೂರಿನಿಂದ ಕನ್ನಲಿವರಗಿನ ರಸ್ತೆ ಅಭಿವೃದ್ದಿಗೆ 5 ಕೋಟಿ ರೂ ಮೀಸಲಿಡಲಾಗಿದ್ದು, ಶೀಘ್ರದಲ್ಲೇ ಟಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು. ಕೆರಗೋಡು ಹೋಬಳಿಯ ಮಾರಗೌಡನಹಳ್ಳಿ ಗ್ರಾಮದಲ್ಲಿ ಪಶುಸಂಗೋಪನಾ ಚಿಕಿತ್ಸಾ ಕೇಂದ್ರದ ಕಾಂಪೌಂಡ್ ನಿರ್ಮಾಣಕ್ಕೆ 4 ಲಕ್ಷ ರೂ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 1.98 ಲಕ್ಷ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿ, ಕಸ ವಿಲೇವಾರಿ ಜಾಗಕ್ಕೆ ತಂತಿ ಬೇಲಿ ಹಾಕಲು 1.76 ಲಕ್ಷ ರೂ ಹಾಗೂ ರಸ್ತೆ ಅಭಿವೃದ್ದಿಗೆ 20 ಲಕ್ಷ ರೂ ನೀಡಲಾಗಿದೆ ಎಂದು ವಿವರಿಸಿದರು.

ಕನ್ನಲಿ ಗ್ರಾ.ಪಂ ಉಪಾಧ್ಯಕ್ಷ ನವೀನ್‌ಕುಮಾರ್, ಸದಸ್ಯರಾದ ಚಿಕ್ಕಮಾಸ್ತಿ, ಮಹೇಶ್, ಪಿಡಿಒ ಯೋಗಾನಂದ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಕನ್ನಲಿ ಚನ್ನಪ್ಪ, ನಿಮಿಷಾಂಬ ಸಂಸ್ಥೆಯ ಪುಟ್ಟಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net