ಬಡವರಿಗೆ ನಿವೇಶನ ನೀಡುವುದು ಪುಣ್ಯದ ಕೆಲಸ: ಶಾಸಕ ರವಿಕುಮಾರ್ ಗಣಿಗ ಹೇಳಿಕೆ

MLA Ravikumar meeting with officials Mandya
Published on

ಮಂಡ್ಯ: ಬಡವರಿಗೆ ನಿವೇಶನ ನೀಡುವುದು ಪುಣ್ಯದ ಕೆಲಸ. ಇದಕ್ಕೆ ಎಲ್ಲ ಅಧಿಕಾರಿಗಳು ಕೈಜೋಡಿಸಬೇಕು ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.

ಬಡವರಿಗೆ ನಿವೇಶನ ಹಂಚಿಕೆ ಹಾಗೂ ಸ್ಮಶಾನ ಜಾಗ ಗುರುತಿಸುವ ಸಂಬಂಧ ನಗರದ ತಾಲೂಕು ಪಂಚಾಯಿತಿ ಸಭಾಗಣದಲ್ಲಿ ಗ್ರಾಮಲೆಕ್ಕಾಧಿಕಾರಿ ಹಾಗೂ ಆರ್‌ಐಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಂಡ್ಯ ತಾಲೂಕಿನಲ್ಲಿ ಎಷ್ಟು ಹಳ್ಳಿಗಳಿವೆಯೋ, ಅಷ್ಟೂ ಗುಡಿಸಲು ಮುಕ್ತವಾಗಬೇಕು. ಗ್ರಾಮದಲ್ಲಿ ಎಷ್ಟು ಎಕರೆ ಸರ್ಕಾರಿ ಜಮೀನು ಇದೆ ಎಂಬುದನ್ನು ಗುರುತಿಸಿ. ಅಲ್ಲಿ ಬಡವರಿಗೆ ನಿವೇಶನ ನೀಡುವ ವ್ಯವಸ್ಥೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಗುತ್ತಲು ಹೊರವಲಯದಲ್ಲಿ ಸುಮಾರು 25 ಎಕರೆ ಸರ್ಕಾರಿ ಜಮೀನು ಇದೆ ಎಂಬ ಮಾಹಿತಿ ಇದೆ. ಇದಕ್ಕೆ ಪೂರಕವಾಗಿ ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ಮುಂದಾಗಬೇಕು. ಕೆಲವೊಂದು ಗ್ರಾಮ ಪಂಚಾಯಿತಿ ಒಂದು ಗ್ರಾಮಕ್ಕೆ ಸೀಮಿತವಾಗಿರುತ್ತದೆ. ಅಲ್ಲಿ ನಿವೇಶನ ನೀಡುವುದು ಸುಲಭ. ಆದರೆ ಮತ್ತೆ ಕೆಲವು ಗ್ರಾಮ ಪಂಚಾಯಿತಿ ಐದು ಗ್ರಾಮಗಳನ್ನು ಒಳಗೊಂಡಿರುತ್ತದೆ. ಅಂತಹ ಪಂಚಾಯಿತಿಯಲ್ಲಿ ಆಯಾ ಗ್ರಾಮದಲ್ಲಿ ಕನಿಷ್ಟ ಮೂರು ಎಕರೆ ಪ್ರದೇಶವನ್ನು ಶೀಘ್ರವಾಗಿ ಗುರುತಿಸಿ ನಿವೇಶನ ನೀಡುವ ವ್ಯವಸ್ಥೆ ಮಾಡಿ ಎಂದು ಹೇಳಿದರು.

ಆಲಕೆರೆ ಗ್ರಾಮ ಪಂಚಾಯಿತಿಗೆ ಬರುವ ಹೊನಗಳ್ಳಿಮಠ ಗ್ರಾಮದಲ್ಲಿ ಇಂತಹ ಸಮಸ್ಯೆ ಇದೆ. ಆ ಗ್ರಾಮದ ಆಯಕಟ್ಟಿನ ಪ್ರದೇಶದಲ್ಲೇ ನಿವೇಶನ ಹುಡುಕಿ ಸ್ಮಶಾನ ಹಾಗೂ ಬಡವರಿಗೆ ನೆರವಾಗಲು ಕ್ರಮ ವಹಿಸಬೇಕು. ನಿವೇಶನ ನೀಡಿದರೆ ನನಗೆ ಎಷ್ಟು ಪುಣ್ಯ ಸಿಗುತ್ತದೋ ನಿಮಗೂ ಅಷ್ಟೇ ಪುಣ್ಯ ಸಿಗುತ್ತದೆ. ಇಂತಹ ಒಳ್ಳೆಯ ಕೆಲಸಕ್ಕೆ ಎಲ್ಲರೂ ಒಗ್ಗೂಡಿ ಮುಂದಾಗಬೇಕು ಎಂದು ಹೇಳಿದರು.

ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್, ಗ್ಯಾರಂಟಿ ಸಮಿತಿಗಳ ತಾಲೂಕು ಅಧ್ಯಕ್ಷ ರುದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net