

ಮಂಡ್ಯ: ಸಾರ್ವಜನಿಕರ ಸಮಸ್ಯೆಯನ್ನು ಆಲಿಸುವ ನಿಟ್ಟಿನಲ್ಲಿ ಶಾಸಕ ರವಿಕುಮಾರ್ ಗಣಿಗ ನಗರದ 17 ಮತ್ತು 18ನೇ ವಾರ್ಡ್‌ಗೆ ಭೇಟಿ ನೀಡಿದರು. ಮಾತ್ರವಲ್ಲದೆ ಗಂಭೀರ ಸಮಸ್ಯೆಗೆ ಕನಿಷ್ಟ ಮಟ್ಟದಲ್ಲಿ ಸ್ಪಂದಿಸದ ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಶಾಸಕರು 18ನೇ ವಾರ್ಡ್‌ನಲ್ಲಿ ಪರಿಶೀಲನೆ ನಡಸುತ್ತಿದ್ದ ವೇಳೆ ರಾಜಕಾಲುವೆಯಿಂದಾಗುತ್ತಿರುವ ತೊಂದರೆ ಹಾಗೂ ನಿವಾಸಿಗಳ ಆರೋಗ್ಯದ ಮೇಲಾಗುತ್ತಿರುವ ಸಮಸ್ಯೆ ಗಮನಕ್ಕೆ ಬಂದಿತ್ತು. ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬೇರೆ ವಾರ್ಡ್‌ಗಳಿಂದ ಕೊಳಚೆ ನೀರು ಹರಿದುಬರುತ್ತದೆ. ಸ್ವಚ್ಛತೆ ಮಾಡಿ ಎಂದರೆ 15 ದಿನವಾದರೂ ಬರುವುದಿಲ್ಲ. ಶಾಸಕರು ಪರಿಶೀಲನೆಗೆ ಬರುತ್ತಾರೆನ್ನುವ ಕಾರಣಕ್ಕೆ ಒಂದು ದಿನ ಮುಂಚಿತವಾಗಿ ಬಂದು ಸ್ವಚ್ಛತೆ ಮಾಡಿದ್ದಾರೆ. ಕೆಟ್ಟ ವಾಸನೆಯಿಂದ ನೆಮ್ಮದಿಯಾಗಿ ಬದುಕು ನಡೆಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಶಾಶ್ವತ ಕ್ರಮ ವಹಿಸುವಂತೆ ಮನವಿ ಮಾಡಿದರು.
ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ, ನಿವಾಸಿಗಳು ತೆರಿಗೆ ಕಟ್ಟುತ್ತಾರೆ. ಹಾಗಿದ್ದ ಮೇಲೆ ಸಮಸ್ಯೆ ಬಗೆಹರಿಸುವುದಕ್ಕೆ ಏನು ಸಮಸ್ಯೆ?. ಮತ್ತೆ ಇಂತಹ ದೂರು ಬರದಂತೆ ಎಚ್ಚರಿಕೆ ವಹಿಸಿ ಎಂದು ಸೂಚನೆ ನೀಡಿದರು. ಇನ್ನು ಪರಿಶೀಲನೆ ಸಮಯದಲ್ಲಿ ಹೌಸಿಂಗ್ ಬೋರ್ಡ್ ಉದ್ಯಾನವನ್ನು ಅಭಿವೃದ್ಧಿಪಡಿಸುವಂತೆ ಸ್ಥಳೀಯರು ಮಾಡಿದ ಮನವಿಗೆ ಸ್ಪಂದಿಸಿದ ಶಾಸಕರು, ಶೀಘ್ರ ಕ್ರಮ ವಹಿಸುವುದಾಗಿ ಭರವಸೆ ನೀಡಿದರು. ಶಾಸಕರ ಪರಿಶೀಲನೆ ವೇಳೆ ಎಂದಿನಂತೆ ಚರಂಡಿ, ಯುಜಿಡಿ ಸಮಸ್ಯೆ ಮಾರ್ಧನಿಸಿದವು.
ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶಿವಲಿಂಗೇಗೌಡ, ಪೌರಾಯುಕ್ತ ಮಂಜುನಾಥ್ ಇತರರಿದ್ದರು.