

ಮಂಡ್ಯ: ಕೋಟ್ಯಂತರ ರೂ ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಗುತ್ತಿಗೆದಾರರಿಗೆ ಶಾಸಕ ರವಿಕುಮಾರ್ ಗಣಿಗ ಸೂಚನೆ ನೀಡಿದರು.
ತಾಲೂಕಿನ ಬಸರಾಳು ಹೋಬಳಿಯ ಚೋಕನಹಳ್ಳಿ, ಹನಗನಹಳ್ಳಿ, ಬೇಬಿ, ಮಾಯಪ್ಪನಹಳ್ಳಿ ಹಾಗೂ ಚಿಕ್ಕಬಳ್ಳಿ ಗ್ರಾಮದಲ್ಲಿ 1.75 ಕೋಟಿ ರೂ ವೆಚ್ಚದ ರಸ್ತೆ ಹಾಗೂ ಚರಂಡಿ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯ ಅನುದಾನದಲ್ಲಿ ಚೋಕನಹಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಕಾಲನಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ 50 ಲಕ್ಷ ರೂ., ಹನಗನಹಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಕಾಲನಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ 25 ಲಕ್ಷ ರೂ., ಬೇಬಿ ಗ್ರಾಮದ ಪರಿಶಿಷ್ಟ ಪಂಗಡ ಕಾಲನಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ 25 ಲಕ್ಷ ರೂ., ಮಾಯಪ್ಪನಹಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಕಾಲನಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ 20 ಲಕ್ಷ ರೂ., ಚಿಕ್ಕಬಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಲನಿಗೆ 50 ಲಕ್ಷ ರೂ ಅನುದಾನ ನೀಡಲಾಗಿದೆ. ಇನ್ನೊಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ಅಂತೆಯೇ ಮಾರ್ಚ್ ಅಂತ್ಯದೊಳಗೆ ಮಂಡ್ಯ ನಗರದಲ್ಲಿ ಎಸ್‌ಸಿಎಸ್‌ಟಿ ಯೋಜನೆಯಡಿ 8 ಕೋಟಿ ರೂ.ಗಳ ಅನುದಾನ ಮತ್ತು ಸಾಮಾನ್ಯ ಯೋಜನೆ ಅನುದಾನದಲ್ಲಿ ಗ್ರಾಮಾಂತರಕ್ಕಾಗಿ 10 ಕೋಟಿ ರೂ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು. ಅದೇ ರೀತಿ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ಮಂಡ್ಯ ನಗರಕ್ಕೆ 13 ಕೋಟಿ ರೂ ಮಂಜೂರಾಗಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಬನ್ನೂರು ರಸ್ತೆ ಅಭಿವೃದ್ಧಿಗೆ 3 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದ್ದು, ಇನ್ನುಳಿದ 10 ಕೋಟಿ ರೂ.ಗೆ ಅನುದಾನದ ವಿವಿಧ ಕಾಮಗಾರಿಗೆ ಅತಿ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಸಿ.ಎಂ.ದ್ಯಾವಪ್ಪ, ಚಿಕ್ಕಬಳ್ಳಿ ಕೃಷ್ಣ, ಪುನೀತ್, ರಮೇಶ್, ಉಮೇಶ್ ಇತರರಿದ್ದರು.